ಖಾಸಗಿ ಆಸ್ಪತ್ರೆಗಳು ಕೋವಿಡ್ ಚಿಕಿತ್ಸೆಗಾಗಿ ಹೆಚ್ಚಿನ ದರ ವಸೂಲಿ: ಕಾನೂನು ಕ್ರಮಕ್ಕೆ ಮುಂದಾದ ಬಿಬಿಎಂಪಿ

ಬೆಂಗಳೂರು, ಡಿ.30: ಖಾಸಗಿ ಆಸ್ಪತ್ರೆಗಳು ಕೋವಿಡ್ ಚಿಕಿತ್ಸೆಗಾಗಿ ನಿಗದಿತ ದರಕ್ಕಿಂತ ಹೆಚ್ಚು ಮೊತ್ತವನ್ನು ರೋಗಿಗಳಿಂದ ವಸೂಲಿ ಮಾಡಿದ್ದಲ್ಲಿ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಬಿಬಿಎಂಪಿ ಪ್ರಕಟನೆ ಹೊರಡಿಸಿದೆ.
ರಾಜ್ಯ ಸರಕಾರವು ಕೋವಿಡ್ ಚಿಕಿತ್ಸೆಗಾಗಿ ಜನರಲ್ ವಾರ್ಡ್‍ಗೆ 10,000 ರೂ., ಹೆಚ್‍ಡಿಯುಗೆ 12,000 ರೂ., ವೆಂಟಿಲೇಟರ್ ರಹಿತ ಐಸೋಲೇಷನ್ ಐಸಿಯುಗೆ 15,000 ರೂ., ವೆಂಟಿಲೇಟರ್ ಸಹಿತ ಐಸೋಲೇಷನ್ ಐಸಿಯುಗೆ 25,000 ರೂ.ಗಳನ್ನು ನಿಗದಿಪಡಿಸಿದೆ. ಆದರೆ ಖಾಸಗಿ ಆಸ್ಪತ್ರೆಗಳು ನಿಗದಿತ ದರಗಳಿಗಿಂತ ಹೆಚ್ಚನ ದರವನ್ನು ವಸೂಲಿ ಮಾಡಿದರೆ, ಕರ್ನಾಟಕ ಖಾಸಗಿ ವೈದ್ಯಕೀಯ ಸ್ಥಾಪನೆ ಕಾಯ್ದೆ 2017ರ ಸೆಕ್ಷನ್ 11 ಮತ್ತು 11ಎ ನಿಯಮಗಳು ಹಾಗೂ ವಿಪತ್ತು ನಿರ್ವಹಣಾ ಕಾಯ್ದೆ 2005ರ ಸೆಕ್ಷನ್ 24(ಎಫ್) ಮತ್ತು 24 (ಐ) ರ ಅಡಿಯಲ್ಲಿ ಕ್ರಮ ಜರುಗಿಸಲಾಗುತ್ತದೆ ಎಂದು ತಿಳಿಸಿದೆ.
ಕೋವಿಡ್ ದರಗಳ ನಿಯಮ ಉಲ್ಲಂಘನೆಯಾದರೆ ಸಾರ್ವಜನಿಕರು ನೇರವಾಗಿ ಬಿಬಿಎಂಪಿ ಮುಖ್ಯ ಆರೋಗ್ಯಾಧಿಕಾರಿಗಳ ಕಚೇರಿ ದೂರವಾಣಿ ಸಂಖ್ಯೆ 080-22975516 ಅಥವಾ ಸಹಾಯವಾಣಿ ಸಂಖ್ಯೆ 080-22660000 ಅಥವಾ ವಾಟ್ಸಾಪ್ ಸಂಖ್ಯೆ 9480685700ನ್ನು ಸಂಪರ್ಕಿಸಬಹುದಾಗಿದೆ.





