ಪುದುಕೋಟ್ಟೈ: ಶೂಟಿಂಗ್ ರೇಂಜ್ ನಿಂದ ಹಾರಿ ಬಂದ ಗುಂಡಿನಿಂದ ಬಾಲಕನ ತಲೆಗೆ ಗಂಭೀರ ಗಾಯ

ಸಾಂದರ್ಭಿಕ ಚಿತ್ರ:PTI
ಪುದುಕೋಟ್ಟೈ,ಡಿ.30: ಇಲ್ಲಿಗೆ ಸಮೀಪದ ನಾರದಾಮಲೈನ ಶೂಟಿಂಗ್ ರೇಂಜ್ನಲ್ಲಿ ಹಾರಿಸಿದ ಗುಂಡೊಂದು 11 ವರ್ಷ ಪ್ರಾಯದ ಬಾಲಕನ ತಲೆಗೆ ತಾಗಿದ್ದು, ಆತ ಗಂಭೀರವಾಗಿ ಗಾಯಗೊಂಡಿದ್ದಾನೆ.
ಗಾಯಾಳು ಬಾಲಕನನ್ನು ಪುಗಳೇಂದಿ ಎಂದು ಗುರುತಿಸಲಾಗಿದೆ. ಆತ ಶೂಟಿಂಗ್ ರೇಂಜ್ನ ಸಮೀಪದಲ್ಲಿರುವ ಅಮ್ಮಾಚತಿರಮ್ ಗ್ರಾಮದಲ್ಲಿರುವ ತನ್ನ ತಾತನ ಮನೆಯ ಮುಂದೆ ನಿಂತುಕೊಂಡಿದ್ದಾಗ ಹಾರಿಬಂದ ಗುಂಡು ಆತನ ತಲೆಗೆ ಬಡಿದಿದೆ.
ಘಟನೆಗೆ ಸಂಬಂಧಿಸಿ ಎಫ್ಐಆರ್ ದಾಖಲಿಸಲಾಗಿದ್ದು, ಮುಂದಿನ ತನಿಖೆ ನಡೆಯುತ್ತಿದೆ ಎಂದು ರಾಜ್ಯದ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಒಂದು ಬುಲೆಟ್ ಬಾಲಕನ ತಲೆಯನ್ನು ಹೊಕ್ಕಿದೆ ಎಂದು ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಆದರೆ ಗುಂಡೆಸೆತದ ತರಬೇತಿ ಪಡೆಯುತ್ತಿದ್ದ ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆಯ ಸಿಬ್ಬಂದಿ ಹಾರಿಸಿದ ಗುಂಡು ಬಾಲಕನಿಗೆ ತಗಲಿತೇ ಎಂಬ ಪ್ರಶ್ನೆಗೆ ಅವರು ಉತ್ತರಿಸಲು ನಿರಾಕರಿಸಿದರು.
ಬುಲೆಟ್ ಹಾರಿ ಬಂದ ಶೂಟಿಂಗ್ ವಲಯಕ್ಕೂ ಹಾಗೂ ಸಂತ್ರಸ್ತ ಬಾಲಕನಿದ್ದ ಸ್ಥಳದ ನಡುವಿನ ಅಂತರ 1.5 ಕಿ.ಮೀ. ಆಗಿದೆ ಎಂದು ಅಧಿಕಾರಿ ವಿವರಿಸಿದರು. ಗುಂಡು ತಗಲಿದ್ದರಿಂದ ತಲೆಗೆ ಗಂಭೀರವಾದ ಗಾಯವಾದ ಬಾಲಕನನ್ನು ಸರಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಯಿತು. ಆನಂತರ ಆತನನ್ನು ತಂಜಾವೂರಿನ ಸರಕಾರಿ ಮೆಡಿಕಲ್ ಕಾಲೇಜ್ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತೆಂದು ಮೂಲಗಳು ತಿಳಿಸಿವೆ.
ಗಾಯಾಳು ಬಾಲಕನನ್ನು ನರರೋಗ ಸರ್ಜನ್ಗಳ ತಂಡವೊಂದು ಶಸ್ತ್ರಕ್ರಿಯೆ ನಡೆಸುತ್ತಿದೆ ಎಂದು ಆಸ್ಪತ್ರೆ ಉನ್ನತ ವೈದ್ಯಾಧಿಕಾರಿ ತಿಳಿಸಿದ್ದಾರೆ. ಆದರೆ ಬಾಲಕನ ಪ್ರಸಕ್ತ ದೇಹಸ್ಥಿತಿಯ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಲು ಅವರು ನಿರಾಕರಿಸಿದರು. ಘಟನೆಯ ತರುವಾಯ ಶೂಟಿಂಗ್ ವಲಯದಲ್ಲಿ ಕಾರ್ಯಚಟುವಟಿಕೆಗಳನ್ನು ಸ್ಥಗಿತಗೊಳಿಸುವಂತೆ ಜಿಲ್ಲಾಧಿಕಾರಿಗಳು ಅಧಿಕಾರಿಗಳಿಗೆ ಸೂಚಿಸಿದ್ದಾರೆ.





