ದಕ್ಷಿಣ ಆಫ್ರಿಕಾದ ಕ್ವಿಂಟನ್ ಡಿ ಕಾಕ್ ಟೆಸ್ಟ್ ಕ್ರಿಕೆಟ್ಗೆ ನಿವೃತ್ತಿ ಘೋಷಣೆ

Photo: AFP
ಜೋಹಾನ್ಸ್ ಬರ್ಗ್:ದಕ್ಷಿಣ ಆಫ್ರಿಕಾದ ವಿಕೆಟ್ಕೀಪರ್ ಹಾಗೂ ಬ್ಯಾಟರ್ ಕ್ವಿಂಟನ್ ಡಿ ಕಾಕ್ ತಕ್ಷಣವೇ ಜಾರಿಗೆ ಬರುವಂತೆ ಟೆಸ್ಟ್ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದ್ದಾರೆ.
ಗುರುವಾರ ಸೆಂಚುರಿಯನ್ನಲ್ಲಿ ನಡೆದ ಮೂರು ಪಂದ್ಯಗಳ ಸರಣಿಯ ಆರಂಭಿಕ ಟೆಸ್ಟ್ನಲ್ಲಿ ಭಾರತವು ದಕ್ಷಿಣ ಆಫ್ರಿಕಾವನ್ನು 113 ರನ್ಗಳಿಂದ ಸೋಲಿಸಿದ ಕೆಲವೇ ಗಂಟೆಗಳ ನಂತರ ಈ ಘೋಷಣೆ ಮಾಡಿದ್ದಾರೆ.
ಕ್ರಿಕೆಟ್ ದಕ್ಷಿಣ ಆಫ್ರಿಕಾ (ಸಿಎಸ್ ಎ) ಗುರುವಾರ ಡಿಕಾಕ್ ಅವರು ಟೆಸ್ಟ್ನಿಂದ ನಿವೃತ್ತಿಯ ನಿರ್ಧಾರವನ್ನು ತಿಳಿಸುವ ಹೇಳಿಕೆಯನ್ನು ಬಿಡುಗಡೆ ಮಾಡಿದೆ.
"ಇದು ನಾನು ತುಂಬಾ ಸುಲಭವಾಗಿ ತೆಗೆದುಕೊಂಡ ನಿರ್ಧಾರವಲ್ಲ. ನಾನು ಹಾಗೂ ನನ್ನ ಪತ್ನಿ ಸಶಾ ನಮ್ಮ ಮೊದಲ ಮಗುವನ್ನು ಸ್ವಾಗತಿಸಲಿರುವಾಗ ನನ್ನ ಭವಿಷ್ಯ ಹೇಗಿರುತ್ತದೆ ಹಾಗೂ ನನ್ನ ಜೀವನದಲ್ಲಿ ಏನು ಆದ್ಯತೆ ನೀಡಬೇಕು ಎಂಬುದರ ಕುರಿತು ಯೋಚಿಸಲು ನಾನು ಸಾಕಷ್ಟು ಸಮಯವನ್ನು ತೆಗೆದುಕೊಂಡಿದ್ದೇನೆ''ಎಂದು ಡಿ ಕಾಕ್ ಹೇಳಿದ್ದಾರೆ.
2014ರಲ್ಲಿ ಆಸ್ಟ್ರೇಲಿಯ ವಿರುದ್ಧ ಟೆಸ್ಟ್ ಕ್ರಿಕೆಟ್ ಗೆ ಕಾಲಿಟ್ಟಿದ್ದ ಡಿಕಾಕ್ ಈ ತನಕ 54 ಟೆಸ್ಟ್ ಪಂದ್ಯಗಳನ್ನು ಆಡಿದ್ದು 6 ಶತಕಗಳ ಸಹಿತ 38.82ರ ಸರಾಸರಿಯಲ್ಲಿ ಒಟ್ಟು 3,300 ರನ್ ಗಳಿಸಿದ್ದಾರೆ.