ಕೋವಿಡ್ ಪ್ರಕರಣಗಳಲ್ಲಿ ಹಠಾತ್ ಏರಿಕೆ: ಪೂರ್ವಭಾವಿ ಕ್ರಮಕ್ಕೆ 8 ರಾಜ್ಯಗಳಿಗೆ ಕೇಂದ್ರ ನಿರ್ದೇಶ
ಹೊಸದಿಲ್ಲಿ, ಡಿ. 30: ದೇಶದ 14 ನಗರಗಳಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಹಠಾತ್ ಏರಿಕೆ ಹಿನ್ನೆಲೆಯಲ್ಲಿ ಕೂಡಲೇ ಕ್ರಮಗಳನ್ನು ಕೈಗೊಳ್ಳುವಂತೆ ಆಗ್ರಹಿಸಿ ಕೇಂದ್ರ ಸರಕಾರ 8 ರಾಜ್ಯಗಳಿಗೆ ಪತ್ರ ಬರೆದಿದೆ. ದೊಡ್ಡ ನಗರಗಳ ಸುತ್ತಮುತ್ತ ಒಮೈಕ್ರಾನ್ ಪ್ರಕರಣಗಳ ಸಂಖ್ಯೆ ಕೂಡ ತೀವ್ರವಾಗಿ ಏರಿಕೆಯಾಗುತ್ತಿದೆ. ‘‘ಹೆಚ್ಚುತ್ತಿರುವ ಮರಣ ಪ್ರಮಾಣವನ್ನು ತಪ್ಪಿಸಲು ಕ್ರಮ ತೆಗೆದುಕೊಳ್ಳಿ’’ ಎಂದು ಕೇಂದ್ರ ಸಲಹೆ ನೀಡಿರುವುದಾಗಿ ಮೂಲಗಳು ತಿಳಿಸಿವೆ.
ದಿಲ್ಲಿಯ ಹಂತಗಳ ಪ್ರತಿಕ್ರಿಯಾ ಯೋಜನೆ (ಜಿಆರ್ಎಪಿ) ಮಾದರಿಯನ್ನು ದೇಶಾದ್ಯಂತ ಪರಿಶೀಲಿಸಲಾಗುತ್ತಿದೆ ಎಂದು ಅದು ಹೇಳಿದೆ. ದಿಲ್ಲಿ ಹಾಗೂ ಮುಂಬೈಯಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆಯಲ್ಲಿ ಗರಿಷ್ಠ ಏರಿಕೆಯಾಗಿದೆ. ಗುರುಗ್ರಾಮ, ಚೆನ್ನೈ, ಕೋಲ್ಕತಾ, ಬೆಂಗಳೂರು ಹಾಗೂ ಅಹ್ಮದಾಬಾದ್ ಸೇರಿದಂತೆ ಇತರ ನಗರಗಳು ಕೂಡ ಕೋವಿಡ್ ಪ್ರಕರಣಗಳ ಏರಿಕೆಯಲ್ಲಿ ಹಿಂದೆ ಬಿದ್ದಿಲ್ಲ.
ಮುಂಬೈಯಲ್ಲಿ ಬುಧವಾರ (ಹಿಂದಿನ 24 ಗಂಟೆಗಳ ಅವಧಿ) 2,510 ಕೋವಿಡ್ ಪ್ರಕರಣಗಳು ದಾಖಲಾಗಿದ್ದು, ಶೇ. 82 ಏರಿಕೆಯಾಗಿದೆ. ಇದೇ ರೀತಿ ದಿಲ್ಲಿಯಲ್ಲಿ ಕೂಡ ಬುಧವಾರ 923 ಕೋವಿಡ್ ಪ್ರಕರಣಗಳು ವರದಿಯಾಗಿದ್ದು, ಮಂಗಳವಾರದಿಂದ ಶೇ. 86 ಏರಿಕೆಯಾಗಿದೆ. ಒಮೈಕ್ರಾನ್ ಕಾಣಿಸಿಕೊಂಡ 19 ರಾಜ್ಯಗಳಲ್ಲಿ ದಿಲ್ಲಿ ಹಾಗೂ ಮಹಾರಾಷ್ಟ್ರದಲ್ಲಿ ಒಮೈಕ್ರಾನ್ನಿಂದ ತೀವ್ರ ತೊಂದರೆ ಉಂಟಾಗಿದೆ. ಬೆಂಗಳೂರು ಹಾಗೂ ಅಹ್ಮದಾಬಾದ್ನಲ್ಲಿ ಕೂಡ ಓಮೈಕ್ರಾನ್ ಪ್ರಕರಣಗಳ ಸಂಖ್ಯೆಯಲ್ಲಿ ಏರಿಕೆಯಾಗಿವೆ ಎಂದು ಮೂಲಗಳು ತಿಳಿಸಿವೆ. ಡಿಸೆಂಬರ್ 15 ಹಾಗೂ 21ರ ನಡುವೆ ಹರ್ಯಾಣದ ಗುರುಗ್ರಾಮದಲ್ಲಿ 194 ಕೋವಿಡ್ ಪ್ರಕರಣಗಳು ದಾಖಲಾಗಿವೆ. ಡಿಸೆಂಬರ್ 22ರ ವರೆಗೆ 28 ವಾರಗಳಲ್ಲಿ ಈ ಸಂಖ್ಯೆ 738ಕ್ಕೆ ಏರಿಕೆಯಾಗಿದೆ.
ಕೋವಿಡ್ ಪ್ರಕರಣಗಳ ಸಂಖ್ಯೆ ಚೆನ್ನೈಯಲ್ಲಿ ಇದೇ ಅವಧಿಯಲ್ಲಿ 1,039ರಿಂದ 1720ಕ್ಕೆ, ಕೋಲ್ಕತ್ತಾದಲ್ಲಿ 1494ರಿಂದ 2,639ಕ್ಕೆ, ಬೆಂಗಳೂರಿನಲ್ಲಿ 1,445ರಿಂದ 1,902ಕ್ಕೆ ಏರಿಕೆಯಾಗಿದೆ. ಈ ವಾರದ ಆರಂಭದಲ್ಲಿ ದಿಲ್ಲಿ ಯೆಲ್ಲೋ ಅಲರ್ಟ್ ಅಡಿಯಲ್ಲಿ ನಗರ ವಿವಿಧ ಭಾಗದಲ್ಲಿ ನಾಲ್ಕು ಹಂತಗಳ ಪ್ರತಿಕ್ರಿಯಾ ಯೋಜನೆ ಜಾರಿಗೊಳಿಸಿತ್ತು. ಮೂರನೇ ಅಲೆಯ ಸಾಧ್ಯತೆ ಹಿನ್ನೆಲೆಯಲ್ಲಿ ಸಿದ್ಧತೆಯಾಗಿ ಜುಲೈಯಲ್ಲಿ ದಿಲ್ಲಿಯ ವಿಪತ್ತು ನಿರ್ವಹಣಾ ಪ್ರಾಧಿಕಾರ ಈ ಯೋಜನೆಗೆ ಅನುಮತಿ ನೀಡಿತ್ತು.







