ವಿಶ್ವದ ಅತ್ಯುತ್ತಮ ನಾಯಕ ಎಂದು ವಿರಾಟ್ ಕೊಹ್ಲಿ ಸಾಬೀತುಪಡಿಸಿದ್ದಾರೆ: ಮಾಜಿ ಕ್ರಿಕೆಟಿಗ ವಿನೋದ್ ಕಾಂಬ್ಳಿ

ಹೊಸದಿಲ್ಲಿ: ದಕ್ಷಿಣ ಆಪ್ರಿಕಾದ ಸೆಂಚುರಿಯನ್‌ನಲ್ಲಿ ಪ್ರವಾಸಿ ಭಾರತ ತಂಡವು ದಕ್ಷಿಣ ಆಫ್ರಿಕಾ ವಿರುದ್ಧ ಭರ್ಜರಿ ಗೆಲುವು ಸಾಧಿಸಿದ ನಂತರ ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯೆ ನೀಡಿದ ಭಾರತದ ಮಾಜಿ ಕ್ರಿಕೆಟಿಗ ವಿನೋದ್ ಕಾಂಬ್ಳಿ ಅವರು ವಿರಾಟ್ ಕೊಹ್ಲಿಯ ನಾಯಕತ್ವವನ್ನು ಶ್ಲಾಘಿಸಿದರು. ಕೊಹ್ಲಿ ಅವರು ತಾನೊಬ್ಬ "ವಿಶ್ವದ ಅತ್ಯುತ್ತಮ ನಾಯಕ" ಎಂದು ಸಾಬೀತುಪಡಿಸಿದ್ದಾರೆ ಎಂದು ಹೇಳಿದರು.
"ನಾಯಕತ್ವದಲ್ಲಿ ಬದಲಾವಣೆಯ ಮಾತುಗಳು ಕೇಳಿಬರುತ್ತಿವೆ. ಆದರೆ ನಾವು ಏನು ಮಾಡಿದ್ದೇವೆ ಎಂಬುದನ್ನು ನೋಡಿ. ನಾವು ಅದ್ಭುತಗಳನ್ನು ಮಾಡಿದ್ದೇವೆ. ಕೊಹ್ಲಿ ಅವರು ವಿಶ್ವದ ಅತ್ಯುತ್ತಮ ನಾಯಕ ಏಕೆ ಎಂಬುದನ್ನು ಸಾಬೀತುಪಡಿಸಿದ್ದಾರೆ. ಬ್ಯಾಟಿಂಗ್ ವಿಚಾರದಲ್ಲಿ ಹಳೆಯ ಕೊಹ್ಲಿ ಹಿಂತಿರುಗಿದ್ದಾರೆ" ಎಂದು ಕಾಂಬ್ಳಿ ಹಿಂದಿಯಲ್ಲಿ ಬರೆದಿದ್ದಾರೆ.
ಕೊಹ್ಲಿ ಸತತ ಎರಡನೇ ವರ್ಷ ಒಂದೇ ಒಂದು ಅಂತರಾಷ್ಟ್ರೀಯ ಶತಕವನ್ನು ಗಳಿಸಿಲ್ಲ.
ಕೊಹ್ಲಿ ಅವರು ಸೆಂಚುರಿಯನ್ ಟೆಸ್ಟ್‌ನ ಮೊದಲ ಇನ್ನಿಂಗ್ಸ್‌ನಲ್ಲಿ 35 ಹಾಗೂ ಎರಡನೇ ಇನ್ನಿಂಗ್ಸ್‌ನಲ್ಲಿ 18 ರನ್ ಗಳಿಸಿದರು.
ಸೆಂಚುರಿಯನ್‌ನ ಸೂಪರ್‌ಸ್ಪೋರ್ಟ್ ಪಾರ್ಕ್‌ನಲ್ಲಿಗುರುವಾರ ಕೊನೆಗೊಂಡ ಮೊದಲ ಟೆಸ್ಟ್‌ನಲ್ಲಿ ದ.ಆಫ್ರಿಕಾ ವಿರುದ್ಧ 113 ರನ್‌ಗಳಿಂದ ಜಯ ಗಳಿಸುವ ಮೂಲಕ ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಭಾರತವು ದಕ್ಷಿಣ ಆಫ್ರಿಕಾದಲ್ಲಿ ಎರಡನೇ ಟೆಸ್ಟ್ ಜಯವನ್ನು ದಾಖಲಿಸಿದೆ. ಈ ತಿಂಗಳ ಆರಂಭದಲ್ಲಿ ಭಾರತದ ಸೀಮಿತ ಓವರ್‌ಗಳ ನಾಯಕ ಸ್ಥಾನ ಕಳೆದುಕೊಂಡ ನಂತರ ಟೆಸ್ಟ್ ನಾಯಕ ಕೊಹ್ಲಿಗೆ ಇದು ಮೊದಲ ಜಯವಾಗಿದೆ.
ಸೆಂಚುರಿಯನ್ ಟೆಸ್ಟ್‌ನ ನಾಲ್ಕನೇ ಇನ್ನಿಂಗ್ಸ್‌ನಲ್ಲಿ ಜಸ್ಪ್ರೀತ್ ಬುಮ್ರಾ ಮತ್ತು ಮುಹಮ್ಮದ್ ಶಮಿ ತಲಾ ಮೂರು ವಿಕೆಟ್ ಪಡೆದರು.