ಕಡೂರು: ಬಾಲಕಿ ಅಪಹರಣ ಪ್ರಕರಣ; ಆರೋಪಿಗಳ ಬಂಧನ

ಚಿಕ್ಕಮಗಳೂರು, ಡಿ.31: ಅಪಹರಣಕ್ಕೊಳಗಾಗಿದ್ದ ಬಾಲಕಿಯೋರ್ವಳನ್ನು ಪತ್ತೆ ಹಚ್ಚಿ ಆರೋಪಿಗಳನ್ನು ಬಂಧಿಸುವಲ್ಲಿ ಜಿಲ್ಲೆಯ ಕಡೂರು ಪೊಲೀಸ್ ಠಾಣಾಧಿಕಾರಿಗಳು ಯಶಸ್ವಿಯಾಗಿದ್ದಾರೆ ಎಂದು ಎಸ್ಪಿ ಎಂ.ಎಚ್.ಅಕ್ಷಯ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಡಿ.27ರಂದು ಮುಂಜಾನೆ ಕಡೂರು ತಾಲೂಕಿನ ಮರಡಿಹಳ್ಳಿ ಗ್ರಾಮದ ನಿವಾಸಿ ಓಂಕಾರಪ್ಪ ಎಂಬವರು ತನ್ನ ಪತ್ನಿ ಹಾಗೂ 17 ವರ್ಷದ ಮಗಳೊಂದಿಗೆ ಕುಂಬಳ ಗ್ರಾಮದ ಕ್ರಾಸಿಂಗ್ ಬಳಿ ತೆರಳುತ್ತಿದ್ದ ಸಂದರ್ಭ ಸಿದ್ದೇನಹಳ್ಳಿಯ ಹನುಮಂತಪ್ಪ ಎಂಬವರ ಹೊಲದ ಬಳಿ ಮರಡಿಹಳ್ಳಿ ಕಡೆಯಿಂದ ಬಂದ ಬೊಲೆರೋ ವಾಹನವೊಂದು ಬಂದಿದೆ. ವಾಹನದಲ್ಲಿದ್ದ ಎಸ್.ಜಿ.ಕೊಪ್ಪಲು ಗ್ರಾಮದ ಗೋವಿಂದಪ್ಪ, ಪರಮೇಶ್, ಸಣೇಗೌಡ ಸೇರಿದಂತೆ ಮತ್ತಿಬ್ಬರು ಹಾಗೂ ಹೊಲದಲ್ಲಿ ಅಡಗಿ ಕುಳಿತಿದ್ದ ನಾಲ್ವರು ಸೇರಿ ಏಕಾಏಕಿ ತಮ್ಮ ಮೇಲೆ ಹಲ್ಲೆ ಮಾಡಿದ್ದಲ್ಲದೇ ಮಗಳನ್ನು ಬಲವಂತದಿಂದ ಕಾರಿಗೆ ಹತ್ತಿಸಿಕೊಂಡು ಅಪಹರಿಸಿದ್ದಾರೆ. ಈ ಘಟನೆ ಸಂಬಂಧ ಓಂಕಾರಪ್ಪ ಅವರು ತಮ್ಮ ಊರಾದ ಮರಡಿಹಳ್ಳಿ ಗ್ರಾಮಕ್ಕೆ ಹಿಂದಿರುಗಿ ವಿಚಾರ ತಿಳಿಸಿದಾಗ ಮಗಳನ್ನು ಅಪಹರಿಸಿದ ಕೃತ್ಯದ ಹಿಂದೆ ಅದೇ ಗ್ರಾಮದ ಮಾರುತಿ ಹಾಗೂ ಮಲ್ಲೇಶ್ ಎಂಬವರು ಇರುವುದು ತಿಳಿದು ಬಂದಿದೆ.
ಕೂಡಲೇ ಓಂಕಾರಪ್ಪ ಅವರು ಕಡೂರು ಪೊಲೀಸ್ ಠಾಣೆಗೆ ಆಗಮಿಸಿ ಮಗಳನ್ನು ಅಪಹರಿಸಿದವರ ವಿರುದ್ಧ ದೂರು ನೀಡಿದ್ದಾರೆ. ದೂರು ದಾಖಲಿಸಿಕೊಂಡ ಕಡೂರು ಪೊಲೀಸರು ಅಪಹರಣಕ್ಕೊಳಗಾದ ಬಾಲಕಿಯ ಪತ್ತೆಗೆ ತನಿಖೆ ಆರಂಭಿಸಿದ್ದು, ಡಿ.29ರಂದು ಬಾಲಕಿಯನ್ನು ಕಡೂರು ತಾಲೂಕಿನ ಸಗನೀಬಸವನಹಳ್ಳಿ ಗ್ರಾಮದಲ್ಲಿ ಪತ್ತೆ ಹಚ್ಚಿ ಆರೋಪಿಗಳನ್ನು ಬಂಧಿಸಿದ್ದಾರೆ ಎಂದು ಎಸ್ಪಿ ಅಕ್ಷಯ್ ತಿಳಿಸಿದ್ದಾರೆ.
ವಶಕ್ಕೆ ಪಡೆದ ಬಾಲಕಿಯನ್ನು ವೈದ್ಯಕೀಯ ಪರೀಕ್ಷೆಗೊಳಪಡಿಸಲಾಗಿದ್ದು, ಬಂಧಿತ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ. ಪ್ರಕರಣದಲ್ಲಿ ಭಾಗಿಯಾಗಿದ್ದ ಕೆಲ ಆರೋಪಿಗಳು ತಲೆಮರೆಸಿಕೊಂಡಿದ್ದು, ಅವರ ಬಂಧನಕ್ಕೆ ಬಲೆ ಬೀಸಲಾಗಿದೆ ಎಂದು ತಿಳಿಸಿರುವ ಎಸ್ಪಿ ಅಕ್ಷಯ್, ಬಾಲಕಿ ಅಪಹರಣದ ಪ್ರಕರಣದ ತನಿಖೆಯಲ್ಲಿ ಕಡೂರು ಪಿಎಸ್ಸೈಗಳಾದ ರಮ್ಯಾ, ನವೀನ್, ಶ್ರೀಗುರು ಸಜ್ಜನ್, ಮಂಜುನಾಥ, ಸಿಬ್ಬಂದಿ ಕೃಷ್ಣಮೂರ್ತಿ, ರಾಜಪ್ಪ, ಓಂಕಾರ್, ಶಿವರಾಜ್, ಅಂಜುಮ್ ನಯಾಜ್ ಭಾಗಿಯಾಗಿದ್ದರು ಎಂದು ತಿಳಿಸಿದ್ದಾರೆ.







