ಕೋಟ ಕೊರಗರ ಮೇಲಿನ ಪೊಲೀಸ್ ದೌರ್ಜನ್ಯ; ಶ್ರೀರಾಮುಲುರನ್ನು ಸಚಿವ ಸ್ಥಾನದಿಂದ ವಜಾಗೊಳಿಸಿ: ಎಸ್.ಡಿ.ಬಸವರಾಜ್

ಉಡುಪಿ, ಡಿ.31: ಕೋಟ ಕೊರಗರ ಮೇಲಿನ ಪೊಲೀಸ್ ದೌರ್ಜನ್ಯಕ್ಕೆ ಸಂಬಂಧಿಸಿ ಪರಿಶಿಷ್ಟ ಪಂಗಡ ಕಲ್ಯಾಣ ಸಚಿವ ಹಾಗೂ ಆದಿವಾಸಿ ಎನಿಸಿ ಕೊಂಡಿರುವ ಶ್ರೀರಾಮುಲು ಈವರೆಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಆದಿವಾಸಿಗಳಿಗೆ ರಕ್ಷಣೆ ನೀಡುವಲ್ಲಿ ವಿಫಲರಾಗಿರುವ ಶ್ರೀರಾಮುಲು ಕೂಡಲೇ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಇಲ್ಲದಿದ್ದರೆ ಮುಖ್ಯಮಂತ್ರಿಗಳು ಶ್ರೀರಾಮುಲುರನ್ನು ಸಚಿವ ಸ್ಥಾನದಿಂದ ವಜಾಗೊಳಿಸಬೇಕು ಎಂದು ಆಮ್ ಆದ್ಮಿ ಪಕ್ಷದ ರಾಜ್ಯ ಉಪಾಧ್ಯಕ್ಷ ಹಾಗೂ ಕರ್ನಾಟಕ ರಾಜ್ಯ ಮಾಜಿ ಶಾಸಕರ ವೇದಿಕೆಯ ಪ್ರಧಾನ ಕಾರ್ಯದರ್ಶಿ ಎಸ್.ಡಿ.ಬಸವರಾಜ್ ಒತ್ತಾಯಿಸಿದ್ದಾರೆ.
ಸಂತ್ರಸ್ತ ಕೊರಗ ಕುಟುಂಬದ ಮನೆಗೆ ಭೇಟಿ ನೀಡಿದ ಬಳಿಕ ಉಡುಪಿ ಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡುತಿದ್ದರು. ಆರ್ಥಿಕ ವಾಗಿ ಹಿಂದುಳಿದಿರುವ ಆದಿಮ ಬುಡಕಟ್ಟು ಎನಿಸಿಕೊಂಡಿರುವ ಕೊರಗ ಸಮುದಾಯದ ಮೇಲೆ ನಡೆದ ಪೊಲೀಸ್ ದೌರ್ಜನ್ಯ ಅತ್ಯಂತ ಹೇಯ ಕೃತ್ಯ ವಾಗಿದೆ. ಈ ಘಟನೆಗೆ ಸಂಬಂಧಿಸಿ ಶ್ರೀರಾಮುಲು ಸಂಬಪಂಧಪಟ್ಟ ಅಧಿಕಾರಿ ಗಳಿಗೆ ಸೂಚಿಸಿ ಕೊರಗ ಕುಟುಂಬಕ್ಕೆ ರಕ್ಷಣೆ ನೀಡಿಲ್ಲ ಮತ್ತು ಕಾನೂನಾತ್ಮಕವಾದ ಕ್ರಮ ಜರಗಿಸಿಲ್ಲ. ಶ್ರೀರಾಮುಲು ವಿರುದ್ಧ ಕ್ರಮ ಜರಗಿಸದಿದ್ದರೆ ಜನಾಂದೋಲನ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಈಗಾಗಲೇ ಸಾಕಷ್ಟು ಶೋಷಣೆಗೆ ಒಳಪಟ್ಟ ಕೊರಗ ಸಮುದಾಯದ ಜನ ಸಂಖ್ಯೆ ಕೇವಲ 16ಸಾವಿರ ಮಾತ್ರ ಇದೆ. ಇಂತಹ ಸಮುದಾಯವನ್ನು ರಕ್ಷಿಸುವ ಬದಲು ದೌರ್ಜನ್ಯ ಎಸಗಿರುವುದು ಪೊಲೀಸ್ ಇಲಾಖೆಗೆ ಶೋಭೆ ತರಲ್ಲ. ಈಗಾಗಲೇ ಅಮಾನತುಗೊಳಿಸುವ ಮೂಲಕ ಎಸ್ಸೈ ಮೇಲಿನ ಆರೋಪ ಸಾಬೀತಾಗಿದ್ದು, ಅವರನ್ನು ಪರಿಶಿಷ್ಟ ಪಂಗಡ ದೌರ್ಜನ್ಯ ಕಾಯಿದೆಯಡಿ ಪ್ರಕರಣ ದಾಖಲಿಸಿ ಬಂಧಿಸಬೇಕು ಎಂದು ಅವರು ಆಗ್ರಹಿಸಿದರು.
ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ಕೇವಲ ಸೌರ್ಜನ್ಯ ಕ್ಕಾಗಿ ಸಂತ್ರಸ್ತರ ಮನೆಗೆ ಭೇಟಿ ನೀಡಿದ್ದಾರೆಯೇ ಹೊರತು ಅವರ ರಕ್ಷಣೆ ಹಾಗೂ ಪರಿಹಾರಕ್ಕೆ ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಆದುದರಿಂದ ಕೋಟ ಶ್ರೀನಿವಾಸ ಪೂಜಾರಿ ತಮ್ಮ ಜನಾಬ್ದಾರಿಯನ್ನು ಸರಿಯಾಗಿ ನಿರ್ವಹಿಸಿಲ್ಲ ಎಂದು ಅವರು ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ಆಮ್ ಆದ್ಮಿ ಪಕ್ಷದ ಉಡುಪಿ ಜಿಲ್ಲಾ ಮುಖ್ಯಸ್ಥ ಸ್ಟಿಫನ್ ರಿಚರ್ಡ್ ಲೋಬೊ, ಮುಖಂಡರಾದ ಸುರೇಶ್ ಭಂಡಾರಿ, ಆಶ್ಲೆ ಕರ್ನೆ ಲಿಯೋ, ವಿಜಯಾನಂದ ಪಾಂಗಾಳ, ರಮೇಶ್ ಕೋಟ್ಯಾನ್, ಕಿಶನ್ ಪೂಜಾರಿ ಉಪಸ್ಥಿತರಿದ್ದರು.







