ಉತ್ತರಾಖಂಡ: ದಲಿತ ಅಡುಗೆಯಾಳಿಗೆ ಬಹಿಷ್ಕಾರ ಪ್ರಕರಣದಲ್ಲಿ 30 ಜನರ ವಿರುದ್ಧ ಪ್ರಕರಣ ದಾಖಲು

ಸಾಂದರ್ಭಿಕ ಚಿತ್ರ
ಡೆಹ್ರಾಡೂನ್,ಡಿ.31: ಉತ್ತರಾಖಂಡದ ಚಂಪಾವತ್ ಜಿಲ್ಲೆಯ ಪ್ರೌಢಶಾಲೆಯೊಂದರಲ್ಲಿ ದಲಿತ ಮಹಿಳೆ ತಯಾರಿಸಿದ್ದ ಮಧ್ಯಾಹ್ನದೂಟವನ್ನು ಮೇಲ್ಜಾತಿಗಳ ಮಕ್ಕಳು ಬಹಿಷ್ಕರಿಸಿದ ಬಳಿಕ ಆಕೆಯನ್ನು ವಜಾಗೊಳಿಸಿದ್ದಕ್ಕೆ ಸಂಬಂಧಿಸಿದಂತೆ 30 ಜನರ ವಿರುದ್ಧ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.
ಕೆಲಸದಿಂದ ವಜಾಗೊಂಡಿರುವ ಸುನೀತಾ ದೇವಿ ಸಲ್ಲಿಸಿದ್ದ ದೂರಿನ ಮೇರೆಗೆ ಪೊಲೀಸರು ಆರೋಪಿಗಳ ವಿರುದ್ಧ ಎಸ್ಸಿ ಮತ್ತು ಎಸ್ಟಿ (ದೌರ್ಜನ್ಯ ತಡೆ) ಕಾಯ್ದೆ ಮತ್ತು ಐಪಿಸಿ ಅಡಿ ಆರೋಪಗಳನ್ನು ಹೊರಿಸಿದ್ದಾರೆ.
ಮಹೇಶ ಚೌರಾಕೋಟಿ,ದೀಪಾ ಜೋಷಿ,ಬಾಬು ಗೆಹ್ತೋರಿ,ಸತೀಶಚಂದ್ರ,ನಾಗೇಂದ್ರ ಜೋಶಿ ಮತ್ತು ಶಂಕರ್ ದತ್ತ ಆರೋಪಿಗಳಲ್ಲಿ ಸೇರಿದ್ದು,ಇತರ 24 ಆರೋಪಿಗಳನ್ನು ಗುರುತಿಸಲಾಗಿಲ್ಲ ಎಂದು ಚಂಪಾವತ್ ಎಸ್ಪಿ ದೇವೇಂದ್ರ ಪಿಂಚಾ ತಿಳಿಸಿದರು.
ಎಲ್ಲ ಆರೋಪಿಗಳು ಸುಖಿಧಾಂಗ್ ಗ್ರಾಮ ಮತ್ತು ಸಮೀಪದ ಪ್ರದೇಶಗಳಿಗೆ ಸೇರಿದವರಾಗಿದ್ದಾರೆ. ಈವರೆಗೆ ಯಾರನ್ನೂ ಬಂಧಿಸಲಾಗಿಲ್ಲ.
ಮೇಲ್ಜಾತಿಗೆ ಸೇರಿದ ಶಕುಂತಳಾ ದೇವಿ ಎಂಬಾಕೆಯ ಬದಲು ಡಿ.13ರಂದು ಅಡುಗೆ ತಯಾರಕಿಯಾಗಿ ಸೇರಿದ್ದ ಸುನೀತಾ ದೇವಿಯ ನೇಮಕವನ್ನು ಪ್ರತಿಭಟಿಸಿ ಮೇಲ್ಜಾತಿಗಳಿಗೆ ಸೇರಿದ 43 ವಿದ್ಯಾರ್ಥಿಗಳು ಮಧ್ಯಾಹ್ನದೂಟವನ್ನು ಬಹಿಷ್ಕರಿಸಿದ ಬಳಿಕ ಡಿ.23ರಂದು ಆಕೆಯನ್ನು ಕೆಲಸದಿಂದ ವಜಾಗೊಳಿಸಲಾಗಿತ್ತು. ದೇವಿ ನೇಮಕದಲ್ಲಿ ನಿಯಮಗಳನ್ನು ಉಲ್ಲಂಘಿಸಲಾಗಿತ್ತು ಎಂದು ಜಿಲ್ಲಾಡಳಿತದ ಅಧಿಕಾರಿಗಳು ತಿಳಿಸಿದ್ದರು. ಇದಕ್ಕೆ ಪ್ರತಿಯಾಗಿ 23 ದಲಿತ ವಿದ್ಯಾರ್ಥಿಗಳು ಮೇಲ್ಜಾತಿಯ ಮಹಿಳೆ ತಯಾರಿಸಿದ್ದ ಮಧ್ಯಾಹ್ನದೂಟವನ್ನು ಬಹಿಷ್ಕರಿಸಿದ್ದರು.







