ಕೊಡಗಿನ ಪ್ರವಾಸಿತಾಣಗಳು ಭರ್ತಿ: ಹೊಸ ವರ್ಷಾಚರಣೆಯಿಲ್ಲದೆ ಪ್ರವಾಸೋದ್ಯಮಿಗಳಿಗೆ ನಿರಾಸೆ

ಮಡಿಕೇರಿ ಡಿ.31 : ಸರಕಾರದ ಕಟ್ಟುನಿಟ್ಟಿನ ಮಾರ್ಗಸೂಚಿಯ ನಡುವೆಯೂ ಕೊಡಗಿನ ಪ್ರವಾಸಿತಾಣಗಳು ಕಳೆದ ಐದು ದಿನಗಳಿಂದ ಭರ್ತಿಯಾಗುತ್ತಿವೆ. ವರ್ಷದ ಕೊನೆಯ ದಿನವಾದ ಇಂದು ಹೆಚ್ಚಿನ ಸಂಖ್ಯೆಯ ಪ್ರವಾಸಿಗರು ಮಡಿಕೇರಿಯ ರಾಜಾಸೀಟು ಉದ್ಯಾನವನ ಮತ್ತು ಅಬ್ಬಿ ಜಲಪಾತ ವ್ಯಾಪ್ತಿಯಲ್ಲಿ ಕಾಣಿಸಿಕೊಂಡರು.
ಸಂಜೆಯಾಗುತ್ತಲೇ ರಾಜಾಸೀಟ್ ನಲ್ಲಿ ಸೂರ್ಯಾಸ್ತವನ್ನು ಕಣ್ತುಂಬಿಕೊಳ್ಳಲು ಪ್ರವಾಸಿಗರು ಮುಗಿ ಬಿದ್ದರು. ಫೋಟೋ ಕ್ಲಿಕ್ಕಿಸಿ, ಸೆಲ್ಫಿ ತೆಗೆದುಕೊಂಡು ಸಂಭ್ರಮಿಸಿದರು. ಚಳಿಯ ವಾತಾವರಣದ ನಡುವೆ ಕ್ರಿಸ್‍ಮಸ್ ರಜೆಯ ಮಜಾವನ್ನು ಅನುಭವಿಸುತ್ತಿರುವ ಪ್ರವಾಸಿಗರು ರಾತ್ರಿ 10 ಗಂಟೆಯ ನಂತರ ಹೊಸ ವರ್ಷಾಚರಣೆಗೆ ಅವಕಾಶವಿಲ್ಲದೆ ನಿರಾಶೆಗೊಂಡಿದ್ದಾರೆ.
ಆದರೂ ರೆಸಾರ್ಟ್, ಹೊಟೇಲ್, ಲಾಡ್ಜ್, ಹೋಂಸ್ಟೇಗಳು ಭರ್ತಿಯಾಗಿದ್ದು, ಪ್ರವಾಸೋದ್ಯಮಿಗಳಿಗೆ ಭರ್ಜರಿ ವ್ಯಾಪಾರವಾಗುತ್ತಿದೆ. ಹೆಚ್ಚಿನ ಲಾಭ ಮಾಡಿಕೊಳ್ಳುವ ನಿರೀಕ್ಷೆಗಳು ಸರಕಾರದ ಕಠಿಣ ಮಾರ್ಗಸೂಚಿಗಳಿಂದ ಹುಸಿಯಾಗಿದೆ. ಇದರಿಂದ ಪ್ರವಾಸೋದ್ಯಮವನ್ನೇ ನಂಬಿಕೊಂಡಿರುವವರು ಬೇಸರಗೊಂಡಿದ್ದಾರೆ.
Next Story





