ಎಟಿಎಂ ಬಳಕೆ ಜ.1ರಿಂದ ದುಬಾರಿ

ಮುಂಬೈ,ಡಿ.31: ಎಟಿಎಂಗಳ ಬಳಕೆಯು ಶನಿವಾರದಿಂದ ದುಬಾರಿಯಾಗಲಿದೆ. ಜನವರಿ 1ರಿಂದ ಗ್ರಾಹಕರು ಅನುಮತಿಸಲ್ಪಟ್ಟ ಉಚಿತ ವಹಿವಾಟುಗಳ (ಹಣಕಾಸು ಹಾಗೂ ಹಣಕಾಸುಯೇತರ) ಮಿತಿಯನ್ನು ಮೀರಿ ನಡೆಸುವ ಪ್ರತಿ ವಹಿವಾಟಿಗೂ 21 ರೂ. ಶುಲ್ಕವನ್ನು ವಿಧಿಸಲಾಗುವುದು. ಆದಾಗ್ಯೂ, ಗ್ರಾಹಕರಿಗೆ ತಿಂಗಳಿಗೆ ತಮ್ಮ ಖಾತೆಯಿರುವ ಬ್ಯಾಂಕ್‌ನಿಂದ 5 ಬಾರಿ ಎಟಿಎಂನಿಂದ ವಹಿವಾಟುಗಳನ್ನು (ಹಣಕಾಸು ಅಥವಾ ಹಣಕಾಸೇತರ) ಉಚಿತವಾಗಿ ಪಡೆಯುವ ಸೌಲಭ್ಯ ಮುಂದುವರಿಯಲಿದೆ.
ಮೆಟ್ರೋ ಕೇಂದ್ರಗಳಲ್ಲಿರುವ ಇತರ ಬ್ಯಾಂಕ್ ಎಟಿಎಂಗಳಿಂದ ಮೂರು ಬಾರಿ ಹಾಗೂ ಮೆಟ್ರೊಯೇತರ ನಗರಗಳಲ್ಲಿರುವ ಇತರ ಬ್ಯಾಂಕ್‌ಗಳ ಎಟಿಎಂಗಳಿಂದ ಐದು ಬಾರಿ ಉಚಿತ ವಹಿವಾಟುಗಳನ್ನು ನಡೆಸಲು ಗ್ರಾಹಕರು ಅರ್ಹರಾಗಿದ್ದಾರೆ.ಬ್ಯಾಂಕುಗಳು ಈ ಮೊದಲು ಎಟಿಎಂನಲ್ಲಿ ನಡೆಸುವ ಪ್ರತಿ ಹಣಕಾಸು ವಹಿವಾಟುಗಳಿಗೆ 15ರಿಂದ 17 ರೂ.ವರೆಗೆ ಹಾಗೂ ಹಣಕಾಸುಯೇತರ ವಹಿವಾಟುಗಳಿಗೆ 5ರಿಂದ 6 ರೂ.ವರೆಗೆ ಶುಲ್ಕವನ್ನು ವಿಧಿಸುತ್ತಿದ್ದವು.
ಎಟಿಎಂಗಳ ನಿಯೋಜನೆ ಹಾಗೂ ನಿರ್ವಹಣೆಗಳ ವೆಚ್ಚದಲ್ಲಿ ಉಂಟಾಗಿರುವ ಹೆಚ್ಚಳವನ್ನು ಸರಿದೂಗಿಸಲು ಗ್ರಾಹಕ ಶುಲ್ಕದಲ್ಲಿ ಏರಿಕೆಯನ್ನು ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.





