ರಾಜ್ಯ ವಕ್ಫ್ ಬೋರ್ಡ್‍ಗೆ ಸಂಬಂಧಿಸಿದ ವಿಷಯಗಳ ಕುರಿತು ಅಬ್ದುಲ್ ಅಝೀಮ್ ಪರಿಶೀಲನೆ
ಬೆಂಗಳೂರು, ಡಿ.31: ರಾಜ್ಯ ವಕ್ಫ್ ಬೋರ್ಡ್‍ಗೆ ಸಂಬಂಧಿಸಿದ ವಿವಿಧ ವಿಷಯಗಳ ಕುರಿತು ಬೋರ್ಡ್‍ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮುಹಮ್ಮದ್ ಯೂಸುಫ್ ಸೇರಿದಂತೆ ಇನ್ನಿತರ ಅಧಿಕಾರಿಗಳೊಂದಿಗೆ ರಾಜ್ಯ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷ ಅಬ್ದುಲ್ ಅಝೀಮ್ ಪರಿಶೀಲನಾ ಸಭೆ ನಡೆಸಿದರು.
ಶುಕ್ರವಾರ ನಗರದ ಅಂಬೇಡ್ಕರ್ ವೀಧಿಯಲ್ಲಿರುವ ವಿವಿ ಗೋಪುರದಲ್ಲಿರುವ ಅಲ್ಪಸಂಖ್ಯಾತರ ಆಯೋಗದ ಕಚೇರಿಯಲ್ಲಿ ಪರಿಶೀಲನಾ ಸಭೆ ನಡೆಸಿದ ಅವರು, ಹಝ್ರತ್ ನಬಿ ಶಾ ಮತ್ತು ಹಝ್ರತ್ ಅತಾವುಲ್ಲಾ ಶಾ(ಬಡಾ ಮಕಾನ್) ದರ್ಗಾಗೆ ಸೇರಿದ ಅಣ್ಣೀಪುರ ಗ್ರಾಮದ ಸರ್ವೆ ನಂ.18ರಲ್ಲಿರುವ ಎರಡು ಎಕರೆ 3 ಗುಂಟೆ ಜಮೀನಿನಲ್ಲಿ ಪ್ರಸ್ತುತ ಹಾಪ್‍ಕಾಮ್ಸ್ ಇರುವ ಬಗ್ಗೆ ಚರ್ಚೆ ನಡೆಸಲಾಯಿತು.
ಬೆಳ್ಳಳ್ಳಿ ಗ್ರಾಮದ ಸರ್ವೆ ನಂ.1 ರಿಂದ 76ರವರೆಗಿನ ಜಮೀನಿಗೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್‍ನಲ್ಲಿ ಸಲ್ಲಿಕೆಯಾಗಿರುವ ಎಸ್‍ಎಲ್‍ಪಿಯ ಸ್ಥಿತಿಗತಿ ಹಾಗೂ ಯಲಹಂಕದಲ್ಲಿರುವ 239 ಎಕರೆ 38 ಗುಂಟೆ ವಕ್ಫ್ ಆಸ್ತಿ(ಮುಸಾಫಿರ್ ಖಾನಾ(ಛತ್ರ)ಸುನ್ನಿ)ಯನ್ನು ವಾಪಸ್ ಪಡೆಯುವ ಬಗ್ಗೆ ನಡೆದಿರುವ ನಡಾವಳಿಗಳ ಬಗ್ಗೆಯೂ ಸಭೆಯಲ್ಲಿ ಚರ್ಚಿಸಲಾಯಿತು.
ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಮಲೆಬೆನ್ನೂರುನಲ್ಲಿರುವ ಜುಮ್ಮಾ ಮಸ್ಜಿದ್ ಸುನ್ನಿ ಕಮಿಟಿ ವತಿಯಿಂದ 1,97,28,593 ರೂ.ಗಳ ಅವ್ಯವಹಾರ ಆಗಿರುವ ಬಗ್ಗೆ, ಬೆಂಗಳೂರಿನ ದೊಡ್ಡಮಾಕನಹಳ್ಳಿಯ ಸರ್ವೆ ನಂ.74ರಲ್ಲಿರುವ ಮುಸ್ಲಿಮ್ ಖಬರಸ್ತಾನ್‍ಗೆ ಸಂಬಂಧಿಸಿದ ವಿಚಾರಗಳ ಬಗ್ಗೆಯೂ ಅಬ್ದುಲ್ ಅಝೀಮ್ ಅಧಿಕಾರಿಗಳೊಂದಿಗೆ ಚರ್ಚಿಸಿದರು.
ಸರಕಾರದ ವತಿಯಿಂದ ಸ್ವಾಧೀನಪಡಿಸಿಕೊಂಡಿರುವ ವಕ್ಫ್ ಸಂಸ್ಥೆಗಳ ಆಸ್ತಿಗಳಿಗೆ ಪರಿಹಾರ ಪಡೆದಿರುವ ಬಗ್ಗೆ, ಒತ್ತುವರಿಯಾಗಿರುವ ವಕ್ಫ್ ಆಸ್ತಿಗಳನ್ನು ಹಿಂಪಡೆಯುವ ಬಗ್ಗೆ ಹಾಗೂ ಅವಧಿ ಮೀರಿದ ಬಳಿಕವೂ ಅಸ್ತಿತ್ವದಲ್ಲಿರುವ ವಕ್ಫ್ ಸಂಸ್ಥೆಗಳ ಆಡಳಿತ ಸಮಿತಿಗಳ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು.
ರಾಜ್ಯ ವಕ್ಫ್ ಬೋರ್ಡ್‍ಗೆ ಸಂಬಂಧಿಸಿದ ಕೆಲಸಗಳು ಸುಗಮವಾಗಿ ನಡೆಯಲು ಅನುಕೂಲವಾಗುವಂತೆ ರಾಜ್ಯದ ನಾಲ್ಕು ಕಂದಾಯ ವಿಭಾಗಗಳ ಕೇಂದ್ರ ಸ್ಥಾನದಲ್ಲಿ ವಿಭಾಗೀಯ ಕಚೇರಿಗಳನ್ನು ತೆರೆದು, ಅಗತ್ಯ ಸಿಬ್ಬಂದಿಗಳನ್ನು ನೇಮಕ ಮಾಡುವ ಸಂಬಂಧ ಪ್ರಸ್ತಾವನೆಯನ್ನು ರಾಜ್ಯ ವಕ್ಫ್ ಬೋರ್ಡ್ ಮುಂದೆ ಮಂಡಿಸುವಂತೆ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗೆ ಅಬ್ದುಲ್ ಅಝೀಮ್ ಸೂಚನೆ ನೀಡಿದರು.
ವಿವಿಧ ನ್ಯಾಯಾಲಯಗಳಲ್ಲಿ ಸುಮಾರು 3000ಕ್ಕೂ ಅಧಿಕ ಪ್ರಕರಣಗಳು ಬಾಕಿ ಇರುವ ಕುರಿತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸಭೆಯ ಗಮನಕ್ಕೆ ತಂದರು. ಈ ವೇಳೆ ನ್ಯಾಯಾಧೀಕರಣದಿಂದ ಹಿಡಿದು ಸುಪ್ರೀಂಕೋರ್ಟ್ ವರೆಗೆ ಬಾಕಿ ಇರುವ ಪ್ರಕರಣಗಳ ವಿವರವನ್ನು ಅಲ್ಪಸಂಖ್ಯಾತರ ಆಯೋಗಕ್ಕೆ ಸಲ್ಲಿಸುವಂತೆ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗೆ ಅಬ್ದುಲ್ ಅಝೀಮ್ ತಿಳಿಸಿದರು.
ಅಲ್ಲದೆ, ಮುಸ್ಲಿಮ್ ಸಮುದಾಯಕ್ಕೆ ಸಂಬಂಧಿಸಿದ ಯಾವುದೆ ವಿಷಯಗಳಿದ್ದರೂ ಅದನ್ನು ಅಲ್ಪಸಂಖ್ಯಾತರ ಆಯೋಗದ ಗಮನಕ್ಕೆ ತರುವಂತೆ ಎಲ್ಲ ಜಿಲ್ಲಾ ವಕ್ಫ್ ಸಲಹಾ ಸಮಿತಿಯ ಅಧ್ಯಕ್ಷರಿಗೆ ಸೂಚನೆ ನೀಡುವಂತೆ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗೆ ಅವರು ಸೂಚಿಸಿದರು.
ವಕ್ಫ್ ಕಾಯ್ದೆಯ ಸೆಕ್ಷನ್ 40ರಲ್ಲಿ ಕಲ್ಪಿಸಲಾಗಿರುವ ಅವಕಾಶದಂತೆ ರಾಜ್ಯ ವಕ್ಫ್ ಬೋರ್ಡ್ ವಕ್ಫ್ ಆಸ್ತಿಗಳನ್ನು ಸ್ವಯಂಪ್ರೇರಿತವಾಗಿ ನೋಂದಣಿ ಮಾಡಿಸಿಕೊಳ್ಳಲು ಮುಂದಾಗಬೇಕು. ಇದರಿಂದಾಗಿ, ರಾಜ್ಯ ವಕ್ಫ್ ಬೋರ್ಡ್‍ನ ಆದಾಯದಲ್ಲಿಯೂ ಏರಿಕೆಯಾಗುತ್ತದೆ ಎಂದು ಅಬ್ದುಲ್ ಅಝೀಮ್ ಹೇಳಿದರು.







