ಕಾಣಿಯೂರು ಪ್ರಕರಣ; ಸಮಾಜ ಘಾತುಕ ಶಕ್ತಿಗಳನ್ನು ಮಟ್ಟಹಾಕಲು ಪೊಲೀಸರ ಹಿಂದೇಟು ಯಾಕೆ?: ಯು.ಟಿ.ಖಾದರ್

ಮಂಗಳೂರು, ಅ.25: ಸಮಾಜ ಘಾತುಕ ಶಕ್ತಿಗಳನ್ನು ಮಟ್ಟಹಾಕಲು ಜಿಲ್ಲಾ ಪೊಲೀಸರು ಯಾಕೆ ಹಿಂದೇಟು ಹಾಕುತ್ತಿದ್ದಾರೆ? ಅವರ ಮೇಲೆ ಕಾನೂನು ಕ್ರಮ ಕೈಗೊಳ್ಳುವ ಧೈರ್ಯವನ್ನು ಪೊಲೀಸರು ಯಾಕೆ ತೋರುವುದಿಲ್ಲ? ಕ್ರಮ ಕೈಗೊಳ್ಳದಂತೆ ರಾಜಕೀಯ ಒತ್ತಡವಿದೆಯೇ? ಖುದ್ದು ಸ್ಥಳದಲ್ಲಿದ್ದುಕೊಂಡು ಹಿಂಸೆ ಎಸಗಿದ ಗ್ರಾಪಂ ಉಪಾಧ್ಯಕ್ಷನನ್ನು ಈವರೆಗೆ ಪೊಲೀಸರು ಯಾಕೆ ಬಂಧಿಸಿಲ್ಲ ಎಂದು ರಾಜ್ಯ ವಿಧಾನ ಸಭೆಯ ವಿಪಕ್ಷ ಉಪನಾಯಕ ಯು.ಟಿ.ಖಾದರ್ ಪ್ರಶ್ನಿಸಿದ್ದಾರೆ.
ಕಡಬ ತಾಲೂಕಿನ ಕಾಣಿಯೂರಿನಲ್ಲಿ ಕಳೆದ ವಾರ ನಡೆದ ಮಾರಣಾಂತಿಕ ಗುಂಪು ಹಲ್ಲೆಯಿಂದ ಗಂಭೀರ ಗಾಯಗೊಂಡು ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮುಹಮ್ಮದ್ ರಫೀಕ್ ಮತ್ತು ರಮೀಝುದ್ದೀನ್ ಅವರನ್ನು ಮಂಗಳವಾರ ಭೇಟಿ ಮಾಡಿದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
ಪ್ರಕರಣದ ಬಗ್ಗೆ ಆರೋಪ-ಪ್ರತ್ಯಾರೋಪ ಕೇಳಿ ಬರುತ್ತಿರುವುದರಿಂದ ಸರಕಾರ ವಿಶೇಷ ತಂಡ ರಚಿಸಿ ತನಿಖೆ ನಡೆಸಬೇಕಿದೆ. ತಪ್ಪು ಯಾರೇ ಮಾಡಲಿ, ಅವರಿಗೆ ಕಾನೂನು ಪ್ರಕಾರ ಶಿಕ್ಷೆಯಾಗಬೇಕು. ಇದು ಗೂಂಡಾ ಸಂಸ್ಕೃತಿ. ಪೊಲೀಸ್ ಇಲಾಖೆಯ ಮೇಲೆ ಇವರಿಗೆ ಭಯವಿಲ್ಲ. ಇದ್ದಿದ್ದರೆ ಹೀಗೆ ಅಮಾನುಷವಾಗಿ ಹಲ್ಲೆ ನಡೆಸುತ್ತಿರಲಿಲ್ಲ ಎಂದು ಅಭಿಪ್ರಾಯಪಟ್ಟ ಖಾದರ್, ಜಾತಿ-ಧರ್ಮದ ಹೆಸರಿನಲ್ಲಿ ಕಾನೂನು ಕೈಗೆತ್ತಿಕೊಳ್ಳುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.
ಗ್ರಾಪಂ ಉಪಾಧ್ಯಕ್ಷನೇ ಹಿಂಸೆಗೆ ಇಳಿದಿದ್ದಾನೆ. ಇನ್ನೂ ಆತನ ಬಂಧನವಾಗಿಲ್ಲ. ಆತನನ್ನು ಬಂಧಿಸಲು ಪೊಲೀಸ್ ಇಲಾಖೆಗೆ ಸಾಧ್ಯವಿಲ್ಲವೇ ಅಥವಾ ಬಂಧಿಸದಂತೆ ರಾಜಕೀಯ ಒತ್ತಡ ಇದೆಯೇ ಎಂದು ಖಾದರ್ ಪ್ರಶ್ನಿಸಿದರು.