ಮಂಗಳೂರು: ಆಹಾರ ಸೇವನೆಯಿಂದ ಅಸ್ವಸ್ಥಗೊಂಡಿದ್ದ ನಾಲ್ವರು ಚೇತರಿಕೆ
ಸಾಂದರ್ಭಿಕ ಚಿತ್ರ
ಮಂಗಳೂರು: ನಗರದ ಜೆಪ್ಪು ಬಪ್ಪಾಲ್ನಲ್ಲಿರುವ ಒಂದೇ ಕುಟುಂಬದ ನಾಲ್ಕು ಮಂದಿ ಆಹಾರ ಸೇವನೆಯಿಂದ ಅಸ್ವಸ್ಥಗೊಂಡಿರುವ ಘಟನೆ ಬುಧವಾರ ಬೆಳಕಿಗೆ ಬಂದಿದ್ದು, ಅವರೀಗ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಪಾಂಡೇಶ್ವರ ಪೊಲೀಸ್ ಠಾಣಾ ವ್ಯಾಪ್ತಿಯ ಜೆಪ್ಪು ಬಪ್ಪಾಲ್ನ ನಿವಾಸಿಗಳಾದ ಅರವಿಂದರಾವ್ (52) ಮತ್ತು ಪ್ರಭಾವತಿ (45) ಹಾಗೂ ಸೌರಭ್ (20), ಪ್ರತೀಕ್ (18) ಎಂಬವರು ಮಂಗಳವಾರ ರಾತ್ರಿ ಹೆಸರು ಬೇಳೆ ಹಾಗೂ ಐಸ್ಕ್ರೀಂ ತಿಂದು ಮಲಗಿದ್ದರು ಎನ್ನಲಾಗಿದೆ.
ಬುಧವಾರ ಬೆಳಗ್ಗೆ ಬಾಗಿಲು ತೆಗೆಯದ ಕಾರಣ ಸಂಬಂಧಿಕರಾದ ಕೌಶಿಕ್, ಮಂಜುನಾಥ್, ರೇಣುಕಾ ಎಂಬವರು ಬಾಗಿಲು ತೆಗೆಸಿದ್ದರು. ವಾಂತಿ ಮಾಡಿಕೊಂಡಿದ್ದ ನಾಲ್ಕು ಮಂದಿಯನ್ನು ತಕ್ಷಣ ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಐಸಿಯು ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ನಾಲ್ಕು ಮಂದಿಯೂ ಅಪಾಯದಿಂದ ಪಾರಾಗಿದ್ದಾರೆ ಎಂದು ಪರೀಕ್ಷಿಸಿದ ವೈದ್ಯರು ತಿಳಿಸಿರುವುದಾಗಿ ಪೊಲೀಸರು ಪ್ರತಿಕ್ರಿಯಿಸಿದ್ದಾರೆ.
‘ಹೆಸರು ಬೇಳೆ ಮತ್ತು ಐಸ್ಕ್ರೀಂ ತಿಂದ ಬಳಿಕ ಅಸ್ವಸ್ಥಗೊಂಡಿದ್ದೇವೆ. ನಾವು ಯಾವುದೇ ವಿಷಪದಾರ್ಥ ಸೇವಿಸಿಲ್ಲ ಎಂದು ನಾಲ್ಕು ಮಂದಿ ಹೇಳಿದ್ದಾರೆ. ವೈದ್ಯರ ಪ್ರಾಥಮಿಕ ವರದಿಯನ್ನು ನಿರೀಕ್ಷಿಸುತ್ತಿದ್ದೇವೆ. ಪಾಂಡೇಶ್ವರ ಪೊಲೀಸರು ಆಸ್ಪತ್ರೆಯಲ್ಲೇ ಇದ್ದು, ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸ್ ಆಯುಕ್ತ ಶಶಿಕುಮಾರ್ ತಿಳಿಸಿದ್ದಾರೆ.
ಇದನ್ನೂ ಓದಿ: ಉತ್ತರಪ್ರದೇಶ: ಕನೌಜ್ ನಲ್ಲಿ ಗಾಯಗೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದ ಬಾಲಕಿಯ ಅತ್ಯಾಚಾರ ಆರೋಪಿಯ ಸೆರೆ