ಎಐಸಿಸಿ ಅಧ್ಯಕ್ಷರಾಗಿ ಖರ್ಗೆ ಅಧಿಕಾರ ಸ್ವೀಕಾರ; ರಾಷ್ಟ್ರ ರಾಜಕಾರಣದಲ್ಲಿ ಹೊಸ ಅಧ್ಯಾಯ ಆರಂಭ: ವಿ.ಎಸ್.ಉಗ್ರಪ್ಪ
ಬೆಂಗಳೂರು, ಅ.26: ಇಂದಿನಿಂದ ರಾಷ್ಟ್ರ ರಾಜಕಾರಣದಲ್ಲಿ ಹೊಸ ಅಧ್ಯಾಯ ಆರಂಭವಾಗಲಿದೆ. ಹಿರಿಯ ಅನುಭವಿ ರಾಜಕಾರಣಿ, ಅತ್ಯಂತ ಪ್ರಮುಖ ಸಂಸದೀಯ ಪಟು ಮಲ್ಲಿಕಾರ್ಜುನ ಖರ್ಗೆ ಇಂದು ಎಐಸಿಸಿ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ್ದಾರೆ.
ಬುಧವಾರ ನಗರದ ಕ್ವೀನ್ಸ್ ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಮಲ್ಲಿಕಾರ್ಜುನ ಖರ್ಗೆ ನೇತೃತ್ವದಲ್ಲಿ, ಸೋನಿಯಾ ಗಾಂಧಿ ಹಾಗೂ ಇತರ ಹಿರಿಯ ನಾಯಕರ ಮಾರ್ಗದರ್ಶನದಲ್ಲಿ ಪಕ್ಷ ಬಲಿಷ್ಠವಾಗಿ ಬೆಳೆದು ಮುಂದಿನ ರಾಜ್ಯ ಹಾಗೂ ರಾಷ್ಟ್ರಮಟ್ಟದ ಚುನಾವಣೆಯಲ್ಲಿ ಉತ್ತಮ ಫಲಿತಾಂಶ ಪಡೆಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಮಲ್ಲಿಕಾರ್ಜುನ ಖರ್ಗೆ ಬಸವ, ಬುದ್ಧ ಹಾಗೂ ಮಹಾತ್ಮ ಗಾಂಧಿ ಅವರ ವಿಚಾರಧಾರೆ ಮೇಲೆ ನಂಬಿಕೆ ಇಟ್ಟಿರುವಂತಹ ರಾಜಕಾರಣಿ. ಸಂವಿಧಾನದಲ್ಲಿ ಸಾಮಾಜಿಕ ನ್ಯಾಯದಲ್ಲಿ ನಂಬಿಕೆ ಇಟ್ಟು ರಾಷ್ಟ್ರ ಹಾಗೂ ರಾಜ್ಯ ರಾಜಕಾರಣದಲ್ಲಿ ಜನಸೇವೆ ಮಾಡಿಕೊಂಡು ಬಂದಿರುವ ಅತ್ಯಂತ ಹಿರಿಯ ಪ್ರಾಮಾಣಿಕ ರಾಜಕಾರಣಿ ಎಂದು ಅವರು ಬಣ್ಣಿಸಿದರು.
ಮತ್ತೊಂದೆಡೆ ಸರ್ವಾಧಿಕಾರಿ ಪ್ರವೃತ್ತಿ, ನಾಥುರಾಮ್ ಗೋಡ್ಸೆ ಅವರ ವಿಚಾರಧಾರೆಯಲ್ಲಿ ನಂಬಿಕೆ ಇಟ್ಟಿರುವಂತಹ ಮೋದಿ. ಆರ್ಥಿಕತೆ, ನಿರುದ್ಯೋಗ ಸಮಸ್ಯೆ, ಬಡತನ ನಿರ್ಮೂಲನೆ ಸೇರಿದಂತೆ ಎಲ್ಲ ವಿಚಾರದಲ್ಲಿ ನರೇಂದ್ರ ಮೋದಿ ವೈಫಲ್ಯ ಅನುಭವಿಸಿದ್ದಾರೆ ಎಂದು ಉಗ್ರಪ್ಪ ಟೀಕಿಸಿದರು.
ಮತ್ತೊಂದು ವಿಚಾರ ಎಂದರೆ, ಮುಖ್ಯಮಂತ್ರಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದವರ ಬಗ್ಗೆ ಸಾಕಷ್ಟು ಮಾತನಾಡುತ್ತಿದ್ದಾರೆ. ಮೊನ್ನೆ ಮೋದಿ ಮಾಡಿದ ಭಾಷಣದಲ್ಲಿ ಪ್ರಪಂಚಕ್ಕೆ ರಾಮಾಯಣವನ್ನು ಪರಿಚಯಿಸಿದ ಮಹರ್ಷಿ ವಾಲ್ಮೀಕಿ ಹೆಸರನ್ನು ಪ್ರಸ್ತಾಪಿಸಲಿಲ್ಲ ಎಂದು ಅವರು ಹೇಳಿದರು.
ಅಯೋಧ್ಯೆಯಲ್ಲಿ ಮಹರ್ಷಿ ವಾಲ್ಮೀಕಿ ಸ್ಮಾರಕ ನಿರ್ಮಾಣ ಮಾಡುತ್ತಿಲ್ಲ ಏಕೆ? ಸತ್ಯಮೇವ ಜಯತೆ ಹಾಗೂ ರಾಮನ ಆದರ್ಶಗಳೇ ನನ್ನ ಆದರ್ಶ ಎಂದು ಮೋದಿ ಹೇಳಿದ್ದಾರೆ. ಆದರೆ ಶ್ರೀರಾಮ, ರಾವಣನ ವಿರುದ್ಧ ಯುದ್ಧ ಮಾಡಿದ್ದು ತನ್ನ ಹೆಂಡತಿಯ ರಕ್ಷಣೆಗಾಗಿ. ಆದರೆ ಮೋದಿ ತಮ್ಮ ಪತ್ನಿಯನ್ನು ವಿವಾಹವಾಗುವ ಸಂದರ್ಭದಲ್ಲಿ ಕಷ್ಟ ಹಾಗೂ ಸುಖದಲ್ಲಿ ನಾನು ನಿಮ್ಮ ಜೊತೆ ಇರುತ್ತೇನೆ ಎಂದು ವಾಗ್ದಾನ ಮಾಡಿ, ನಂತರ ತಮ್ಮ ಪತ್ನಿಯನ್ನು ದೂರ ಮಾಡಿದ್ದು ಯಾಕೆ? ಇದು ರಾಮನ ಆದರ್ಶವೇ? ಎಂದು ಉಗ್ರಪ್ಪ ಕಿಡಿಗಾರಿದರು.
ಮೋದಿಯವರೇ ನೀವು ಶ್ರೀ ರಾಮನ ಆದರ್ಶವನ್ನು ಪಾಲಿಸುವುದಾದರೆ 2014ರಲ್ಲಿ ನೀವು ವರ್ಷಕ್ಕೆ ಎರಡು ಕೋಟಿ ಉದ್ಯೋಗ ನೀಡುವುದಾಗಿ ಹೇಳಿದ್ದೀರಿ. ಈಗ ಎಂಟು ವರ್ಷಗಳ ನಂತರ 70 ಸಾವಿರ ಉದ್ಯೋಗ ಸೃಷ್ಟಿಗೆ ಪ್ರಯತ್ನಿಸುತ್ತಿದ್ದೀರಿ. ಬೆಲೆ ಏರಿಕೆ ಕಡಿಮೆ ಮಾಡುವುದಾಗಿ ಹೇಳಿದ್ದೀರಿ, ಆದರೆ ಇಂದು ಪೆಟ್ರೋಲ್ ಡೀಸೆಲ್, ಅಡುಗೆ ಅನಿಲ ಹಾಗೂ ದಿನನಿತ್ಯದ ವಸ್ತುಗಳ ಬೆಲೆ ಗಗನಕ್ಕೆ ಏರಿದೆ. ಒಂದು ಕಡೆ ನಿರುದ್ಯೋಗ ಮತ್ತೊಂದು ಕಡೆ ಬಡತನ ಹಾಗೂ ದೇಶದಲ್ಲಿ ಸಾಮಾಜಿಕ ಸಾಮರಸ್ಯ ನಾಶವಾಗುತ್ತಿದೆ. ಇದೇನಾ ನೀವು ಪಾಲಿಸುತ್ತಿರುವ ಶ್ರೀರಾಮಚಂದ್ರನ ಆದರ್ಶ? ಎಂದು ಅವರು ಪ್ರಶ್ನಿಸಿದರು.
ಕೇವಲ ಮತದಾನಕ್ಕಾಗಿ ರಾಮನ ಜಪ ಮಾಡುವುದನ್ನು ಬಿಟ್ಟು, ರಾಮನ ಆದರ್ಶವನ್ನು ಯಥಾವತ್ತಾಗಿ ಜೀವನದಲ್ಲಿ ಅಳವಡಿಸಿಕೊಂಡರೆ, ಮಹಾತ್ಮ ಗಾಂಧಿ ಹಾಗೂ ನಮ್ಮ ಸಂವಿಧಾನ ಬಯಸಿದಂತಹ ಜಾತಿ ರಹಿತ, ವರ್ಗ ರಹಿತ ಹಾಗೂ ಶೋಷಣೆ ರಹಿತ ಸಮಾಜ ಕಟ್ಟಲು ಸಾಧ್ಯ. ಆದರೆ ಬಿಜೆಪಿಯವರು ಈ ನಿಟ್ಟಿನಲ್ಲಿ ಆಡಳಿತ ನಡೆಸುತ್ತಿಲ್ಲ ಎಂದು ಉಗ್ರಪ್ಪ ಹೇಳಿದರು.
ಶಿವಮೊಗ್ಗದಲ್ಲಿ ಮತ್ತೆ ಕೋಮು ಸಂಘರ್ಷ ಆರಂಭವಾಗಿದೆ. ಈ ರಾಜ್ಯದಲ್ಲಿ ಸರಕಾರ ಆಡಳಿತ ನಡೆಸುತ್ತಿದೆಯೇ ಅಥವಾ ಇಲ್ಲವೇ? ರಾಜ್ಯದಲ್ಲಿ ಗುಪ್ತಚರ ಇಲಾಖೆ ಬದುಕಿದೆಯೋ ಅಥವಾ ಸತ್ತಿದಿಯೋ? ಗುಪ್ತಚರ ಇಲಾಖೆ ಈ ಬಗ್ಗೆ ಮಾಹಿತಿ ಕೊಟ್ಟಿದ್ದರೆ ದ್ದಾರೆ ಈ ಬಗ್ಗೆ ಕ್ರಮ ಜರುಗಿಸಲು ಸರಕಾರ ವಿಫಲವಾಗಿರುವುದು ಏಕೆ? ಗಲಾಟೆಗಳಾಗಲಿ ಎಂಬ ಉದ್ದೇಶದಿಂದಲೇ ಈ ರೀತಿ ನಿರ್ಲಕ್ಷ ಸರಕಾರ ವಹಿಸುತ್ತಿದೆಯೇ? ಎಂದು ಅವರು ಪ್ರಶ್ನಿಸಿದರು.
ಕುವೆಂಪು, ಶಾಂತವೇರಿ ಗೋಪಾಲಗೌಡರಿಗೆ ಜನ್ಮ ನೀಡಿದ ಜಿಲ್ಲೆ ಇಂದು ಮತಿಯವಾದಿಗಳ ಕೇಂದ್ರ ಸ್ಥಾನ ಆಗಿರುವುದು ನೋವಿನ ಸಂಗತಿಯಾಗಿದೆ. ಇದನ್ನು ನಿಯಂತ್ರಿಸುವುದು ಹಾಗೂ ಇದರಲ್ಲಿ ಭಾಗಿಯಾಗಿರುವವರ ವಿರುದ್ಧ ಕ್ರಮ ಜರಗಿಸಿ, ಈ ಬೆಳವಣಿಗೆ ಬಗ್ಗೆ ತನಿಖೆ ನಡೆಸಿ ಇದರ ಹಿಂದಿರುವ ಶಕ್ತಿಗಳು ಯಾರೆಂದು ಪತ್ತೆ ಹಚ್ಚುವ ಕೆಲಸ ಮಾಡಬೇಕು ಎಂದು ಉಗ್ರಪ್ಪ ಆಗ್ರಹಿಸಿದರು.