ಕುಂದಾಪುರ: ಹಂಚು ಕಾರ್ಮಿಕರ 22ನೇ ಮಹಾಸಭೆ

ಕುಂದಾಪುರ: ಸರ್ಕಾರದ ನೀತಿಗಳಿಂದ ಸಮಾಜದಲ್ಲಿರುವ ಸಣ್ಣ ಕೈಗಾರಿಕೆಗಳು ಮುಚ್ಚುವ ಪರಿಸ್ಥಿತಿ ಇದೆ ಜಿಲ್ಲೆಯ ಹಂಚು ಉದ್ದಿಮೆಯೂ ತೀವ್ರ ಸಂಕಷ್ಟದಲ್ಲಿದೆ.ಉದ್ದಿಮೆಯಲ್ಲಿ ಕೆಲಸ ಮಾಡುತ್ತಿರುವ ನೂರಾರು ಕುಟುಂಬಗಳು ಉದ್ಯೋಗ ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ ಎಂದು ಸಿಐಟಿಯು ರಾಜ್ಯ ಉಪಾಧ್ಯಕ್ಷ ಡಾ.ಕೆ.ಪ್ರಕಾಶ್ ಅವರು ಹೇಳಿದರು.
ಅವರು ಕುಂದಾಪುರದ ಹಂಚು ಕಾರ್ಮಿಕರ ಭವನದಲ್ಲಿ ರವಿವಾರ ನಡೆದ 22ನೇ ವಾರ್ಷಿಕ ಮಹಾಸಭೆ ಉದ್ಘಾಟಿಸಿ ಮಾತನಾಡಿದರು.
ಕಾರ್ಮಿಕರಿಗೆ ಇಎಸ್ಐ ವ್ಯವಸ್ಥೆ ಹೋರಾಟದಿಂದ ಪಡೆದರೂ ಸೌಲಭ್ಯ ಪಡೆಯಲು ಜಿಲ್ಲೆಯಲ್ಲಿ ಇಎಸ್ಐ ಡಿಸ್ಪೆನರಿಯಲ್ಲಿ ಖಾಯಂ ವೈದ್ಯರು ಹಾಗೂ ಸೌಲಭ್ಯಗಳು ಇಲ್ಲದಿರುವುದು ಸರ್ಕಾರದ ಜನಪ್ರತಿನಿಧಿಗಳು ಕಾರ್ಮಿಕ ವಿರೋಧಿ ಎಂಬುವುದಕ್ಕೆ ಸಾಕ್ಷಿಯಾಗಿದೆ.ಖಾಸಗಿ ಆಸ್ಪತ್ರೆಗಳ ಲಾಭಿಗೆ ಆಳುವ ಸರಕಾರ ಶರಣಾಗಿದೆ.ಸರಕಾರದ ವೈಫಲ್ಯಗಳು ಜನರನ್ನು ಬಾಧಿಸುತ್ತಿದೆ ಬೆಲೆ ಏರಿಕೆಯಿಂದ ಜನಸಾಮಾನ್ಯರು ತತ್ತರಿಸುತ್ತಿದ್ದಾರೆ.ಕಾರ್ಪೋರೇಟ್ ಆರ್ಥಿಕ ನೀತಿಗಳು ದೇಶವನ್ನು ಹಸಿವಿನ ಸೂಚ್ಯಂಕದಲ್ಲಿ ನೆರೆಯ ಪಾಕಿಸ್ತಾನ ದಿಂದ ಕೆಳಮಟ್ಟಕ್ಕೆ ಇಳಿದಿರುವುದು ಆಘಾತಕಾರಿಯಾಗಿದೆ. ಶೇ 57 ಮಂದಿಯ ಸಂಪತ್ತು ಶೇ 10 ಮಂದಿ ಬಳಿಯಲ್ಲಿರುವುದು ಅಸಮಾನತೆ ತೀವ್ರ ಗತಿಯಲ್ಲಿದೆ ಇವುಗಳನ್ನು ಜನರಿಂದ ಮರೆಮಾಚಲು ಧಾರ್ಮಿಕ ವಿಚಾರಗಳನ್ನು ಮುನ್ನಲೆಗೆ ತಂದು ನೈಜ ಸಮಸ್ಯೆಗಳ ವಿರುದ್ಧ ಹೋರಾಟ ನಡೆಸದಂತೆ ತಡೆಯಲು ಪ್ರಯತ್ನ ನಡೆಯುತ್ತಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಮಹಾಸಭೆಯಲ್ಲಿ ವರದಿ ಪ್ರಧಾನ ಕಾರ್ಯದರ್ಶಿ ಎಚ್ ನರಸಿಂಹ ಮಂಡಿಸಿದರು. ಕೋಶಾಧಿಕಾರಿ ಪ್ರಕಾಶ್ ಕೋಣಿ ಲೆಕ್ಕ ಪತ್ರ ಮಂಡಿಸಿ ಚರ್ಚೆ ನಡೆಸಿ ಅಂಗೀಕರಿಸಲಾಯಿತು.
ಅಧ್ಯಕ್ಷತೆಯನ್ನು ವಿ.ನರಸಿಂಹ ವಹಿಸಿ ಮಾತನಾಡಿದರು. ಸಿಐಟಿಯು ಜಿಲ್ಲಾ ಅಧ್ಯಕ್ಷರಾದ ಕೆ.ಶಂಕರ್ ಮಾತನಾಡಿದರು. ವೇದಿಕೆಯಲ್ಲಿ ಸಂಘದ ಪದಾಧಿಕಾರಿಗಳಾದ ಜಿ.ಡಿ ಪಂಜು ಪೂಜಾರಿ, ಲಕ್ಷ್ಮಣ ಡಿ, ವಾಸು ಪೂಜಾರಿ, ಸುರೇಂದ್ರ,ಚಂದ್ರ ಪೂಜಾರಿ ಉಪಸ್ಥಿತರಿದ್ದರು.
ಮಹಾಸಭೆ ನೂತನ ಸಮಿತಿ ಆಯ್ಕೆ ಮಾಡಿತು.ಅಧ್ಯಕ್ಷರಾಗಿ ವಿ.ನರಸಿಂಹ, ಪ್ರಧಾನ ಕಾರ್ಯದರ್ಶಿ ಯಾಗಿ ಎಚ್ ನರಸಿಂಹ, ಕೋಶಾಧಿಕಾರಿ ಪ್ರಕಾಶ್ ಕೋಣಿ ಸೇರಿದಂತೆ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.








