ಮಹಿಳೆಯರ ಮೇಲೆ ದೌರ್ಜನ್ಯ: ಉತ್ತರ ಪ್ರದೇಶದಲ್ಲಿ ಅತ್ಯಧಿಕ

ಹೊಸದಿಲ್ಲಿ: ದೇಶದಲ್ಲಿ ಕಳೆದ ವರ್ಷ 2014ರ ಬಳಿಕ ಅತ್ಯಧಿಕ ಸಂಖ್ಯೆಯ ಮಹಿಳಾ ದೌರ್ಜನ್ಯ ಪ್ರಕರಣಗಳು ವರದಿಯಾಗಿವೆ.
2021ರಲ್ಲಿ ರಾಷ್ಟ್ರೀಯ ಮಹಿಳಾ ಆಯೋಗಕ್ಕೆ ಮಹಿಳೆಯರ ವಿರುದ್ಧದ ಅಪರಾಧಗಳ 31 ಸಾವಿರ ದೂರುಗಳು ಬಂದಿದ್ದು, ಈ ಪೈಕಿ ಅರ್ಧಕ್ಕಿಂತಲೂ ಹೆಚ್ಚು ದೂರುಗಳು ಉತ್ತರ ಪ್ರದೇಶದಿಂದ ಬಂದಿವೆ.
ದೇಶದಲ್ಲಿ 2020ರಲ್ಲಿ 23,722 ಮಹಿಳಾ ದೌರ್ಜನ್ಯ ಪ್ರಕರಣಗಳು ವರದಿಯಾಗಿದ್ದವು. 2021ರಲ್ಲಿ ಇದು ಶೇಕಡ 30ರಷ್ಟು ಹೆಚ್ಚಿರುವುದು ಅಂಕಿ ಅಂಶಗಳ ವಿಶ್ಲೇಷಣೆಯಿಂದ ತಿಳಿದು ಬರುತ್ತದೆ. 30,864 ಪ್ರಕರಣಗಳ ಪೈಕಿ ಗರಿಷ್ಠ ಅಂದರೆ 11,013 ಪ್ರಕರಣಗಳು ಘನತೆಯಿಂದ ಬದುಕುವ ಹಕ್ಕಿಗೆ ಸಂಬಂಧಿಸಿದ್ದಾಗಿವೆ. ಅಂದರೆ ಇವು ಮಹಿಳೆಯರಿಗೆ ಭಾವನಾತ್ಮಕ ಕಿರುಕುಳ ನೀಡುತ್ತಿರುವ ಪ್ರಕರಣಗಳು. ಮನೆಯೊಳಗಿನ ಹಿಂಸೆಗೆ ಸಂಬಂಧಿಸಿದ 6683 ಪ್ರಕರಣಗಳು ನಂತರದ ಸ್ಥಾನದಲ್ಲಿದ್ದರೆ 4589 ವರದಕ್ಷಿಣೆ ಕಿರುಕುಳದ ಪ್ರಕರಣಗಳಾಗಿವೆ.
ದೇಶದ ಅತ್ಯಧಿಕ ಜನಸಂಖ್ಯೆ ಹೊಂದಿದ ರಾಜ್ಯವಾದ ಉತ್ತರ ಪ್ರದೇಶದಿಂದ ಗರಿಷ್ಠ ಅಂದರೆ 15,828 ದೂರುಗಳು ಬಂದಿವೆ. ದೆಹಲಿಯಿಂದ 3336, ಮಹಾರಾಷ್ಟ್ರದಿಂದ 1504, ಹರ್ಯಾಣದಿಂದ 1460, ಬಿಹಾರದಿಂದ 1456 ದೂರುಗಳು ದಾಖಲಾಗಿವೆ.
2014ರಲ್ಲಿ 33906 ದೂರುಗಳು ರಾಷ್ಟ್ರೀಯ ಮಹಿಳಾ ಆಯೋಗಕ್ಕೆ ಬಂದಿದ್ದನ್ನು ಹೊರತುಪಡಿಸಿದರೆ ಈ ಬಾರಿ ದಾಖಲಾಗಿರುವ ದೂರು ಗರಿಷ್ಠ. ಆಯೋಗದ ಬಗ್ಗೆ ಮಹಿಳೆಯರಲ್ಲಿ ಜಾಗೃತಿ ಮೂಡಿಸಲು ಕೈಗೊಂಡ ಕ್ರಮಗಳಿಂದಾಗಿ ದೂರಿನ ಸಂಖ್ಯೆ ಹೆಚ್ಚಿದೆ ಎನ್ನುವುದು ಆಯೋಗದ ಅಧ್ಯಕ್ಷೆ ರೇಖಾ ಶರ್ಮಾ ಅವರ ಸಮರ್ಥನೆ.
ಈ ವರ್ಷದ ಜುಲೈನಿಂದ ಸೆಪ್ಟೆಂಬರ್‌ವರೆಗೆ ಪ್ರತಿ ತಿಂಗಳು 3100ಕ್ಕೂ ಹೆಚ್ಚು ದೂರುಗಳು ದಾಖಲಾಗಿವೆ. ಇದಕ್ಕೂ ಮುನ್ನ 2018ರಲ್ಲಿ ’ಮೀಟೂ’ ಅಭಿಯಾನ ಪ್ರಚಲಿತವಿದ್ದ 2018ರ ನವೆಂಬರ್‌ನಲ್ಲಿ 3000ಕ್ಕೂ ಹೆಚ್ಚು ದೂರುಗಳು ಬಂದಿದ್ದವು.







