ಅಡ್ಡಹೊಳೆ: ನಿಲ್ಲಿಸಿದ್ದ ಕಾರಿನ ಮೇಲೆ ಬಿದ್ದ ಮರ: ಚಾಲಕ ಸ್ಥಳದಲ್ಲೇ ಮೃತ್ಯು

ಉಪ್ಪಿನಂಗಡಿ, ಜ.2: ರಾಷ್ಟ್ರೀಯ ಹೆದ್ದಾರಿಯ ಬದಿ ಕಾರನ್ನು ನಿಲ್ಲಿಸಿ ಅದರಿಂದ ಇಳಿದು ಬರಬೇಕಾದರೆ ಕಾರು ಚಲಾಯಿಸುತ್ತಿದ್ದ ವ್ಯಕ್ತಿಯ ಮೇಲೆ ಮರವೊಂದು ಬಿದ್ದು ಅವರು ಸ್ಥಳದಲ್ಲೇ ಮೃತಪಟ್ಟ ದಾರುಣ ಘಟನೆ ಶಿರಾಡಿ ಗ್ರಾಮದ ಅಡ್ಡಹೊಳೆ ಎಂಬಲ್ಲಿ ಡಿ.2ರಂದು ಬೆಳಗ್ಗೆ ನಡೆದಿದೆ.
ಮೂಲತಃ ಬೆಂಗಳೂರಿನ ಬೊಮ್ಮನಹಳ್ಳಿಯ ವೆಸ್ಟ್ ಎಂಡ್ ಕೂಡ್ಲುಗೇಟ್ ನಿವಾಸಿ ಸುರೇಶ್ ನಾವಡ (43) ಮೃತಪಟ್ಟವರಾಗಿದ್ದಾರೆ. ಸುರೇಶ್ ನಾವಡ ಅವರು ಬೆಂಗಳೂರಿನ ಸಾಫ್ಟ್ ವೇರ್ ಕಂಪೆನಿಯಲ್ಲಿ ಉದ್ಯೋಗಿಯಾಗಿದ್ದು, ಡಿ.23ರಂದು ಅವರ ತಾಯಿ ಮನೆ ಪಾವಂಜೆಗೆ ಪತ್ನಿ ಹಾಗೂ ತನ್ನಿಬ್ಬರು ಮಕ್ಕಳೊಂದಿಗೆ ಬಂದಿದ್ದರು. ಡಿ.2ರಂದು ಮುಂಜಾನೆ 5:30ಕ್ಕೆ ಸುರೇಶ್ ತನ್ನ ಪತ್ನಿ ಮಕ್ಕಳೊಂದಿಗೆ ಪಾವಂಜೆಯಿಂದ ಬೆಂಗಳೂರಿಗೆ ತನ್ನ ಕಾರಿನಲ್ಲಿ ಹೊರಟಿದ್ದು, ಬೆಳಗ್ಗೆ 7:30ರ ಸಂದರ್ಭ ಮಂಗಳೂರು- ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಅಡ್ಡಹೊಳೆ ಎಂಬಲ್ಲಿಗೆ ತಲುಪಿದಾಗ ಏನೋ ಶಬ್ದ ಕೇಳಿ ಕಾರನ್ನು ರಸ್ತೆ ಬದಿ ನಿಲ್ಲಿಸಿದ್ದಾರೆ. ಬಳಿಕ ಕಾರಿನಿಂದ ಅವರು ಇಳಿಯುತ್ತಿದ್ದಂತೆ ರಸ್ತೆ ಬದಿಯ ಅಭಯಾರಣ್ಯದಿಂದ ಮರವೊಂದು ಏಕಾಏಕಿ ಸುರೇಶ್ ರ ಮೇಲೆ ತುಂಡಾಗಿ ಬಿದ್ದಿದೆ. ಇದರಿಂದ ತೀವ್ರ ಗಾಯಗೊಂಡ ಸುರೇಶ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಘಟನೆಯಿಂದ ಕಾರು ಕೂಡಾ ಸಂಪೂರ್ಣ ಜಖಂಗೊಂಡಿದೆ. ಈ ಸಂದರ್ಭ ಪತ್ನಿ ಹಾಗೂ ಮಕ್ಕಳು ಕಾರಿನಲ್ಲೇ ಇದ್ದು, ಅಪಾಯದಿಂದ ಪಾರಾಗಿದ್ದಾರೆ.
ಈ ಬಗ್ಗೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.








.jpg)

