ದ.ಕ. ಜಿಲ್ಲಾ ಆದಿ ದ್ರಾವಿಡ ಸಮಾಜ ಸೇವಾ ಸಂಘದ ಸಂಭ್ರಮಾಚರಣೆ

ಮಂಗಳೂರು, ಜ.2: ನಗರ ಹೊರವಲಯದ ಕುಂಜತ್ತಬೈಲ್‌ನಲ್ಲಿಆದಿ ದ್ರಾವಿಡ ಸಮುದಾಯ ಭವನ ನಿರ್ಮಾಣ ಹಾಗೂ ಮಿಜಾರ್‌ನಲ್ಲಿ ಕುಲದೈವದ ಮೂಲ ಸ್ಥಾನ (ಸತ್ಯ ಸಾರಮಣಿ ಕ್ಷೇತ್ರ) ಅಭಿವೃದ್ಧಿಗೆ ವೈಯಕ್ತಿಕ ನೆಲೆಯಲ್ಲಿ ಮತ್ತು ಸರಕಾರದ ವತಿಯಿಂದ ನೆರವು ನೀಡಲಾಗುವುದು ಎಂದು ಶಾಸಕ ಡಿ. ವೇದವ್ಯಾಸ ಕಾಮತ್ ಹೇಳಿದರು.
ನಗರದ ಪುರಭವನದಲ್ಲಿ ರವಿವಾರ ನಡೆದ ದ.ಕ.ಜಿಲ್ಲಾ ಆದಿ ದ್ರಾವಿಡ ಸಮಾಜ ಸೇವಾ ಸಂಘ ಮಂಗಳೂರು ಇದರ 15ನೇ ವರ್ಷದ ಸಂಭ್ರಮ ಆಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.
ಕುಂಜತ್ತಬೈಲ್‌ನಲ್ಲಿ ಆದಿ ದ್ರಾವಿಡ ಸಮುದಾಯ ಭವನಕ್ಕಾಗಿ ನಿವೇಶನ ಈಗಾಗಲೇ ಮಂಜೂರಾಗಿದ್ದು, ಭವನ ನಿರ್ಮಾಣಕ್ಕೆ ಸರಕಾರದಿಂದ ವಿಶೇಷ ಅನುದಾನವನ್ನು ಒದಗಿಸಲು ಪ್ರಯತ್ನಿಸುತ್ತೇನೆ. ಮಿಜಾರ್‌ನಲ್ಲಿ ಆದಿ ದ್ರಾವಿಡ ಮೂಲ ಸ್ಥಾನ ಅಭಿವೃದ್ಧಿಗೆ 1 ಎಕರೆ ಜಾಗ ಖರೀದಿಸಲು 30 ಲಕ್ಷ ರೂ. ಗಳನ್ನು ವಿವಿಧ ಮೂಲಗಳಿಂದ ಸಂಗ್ರಹಿಸಿ ಕೊಡುತ್ತೇನೆ. ಅಲ್ಲದೆ ಮೂಲಸ್ಥಾನದ ಜೀಣೋದ್ಧಾರಕ್ಕೆ 5 ಕೋ.ರೂ. ಅಗತ್ಯವಿದ್ದು, ಈ ಬಗ್ಗೆ ಮುಖ್ಯಮಂತ್ರಿಯ ಜೊತೆ ಮಾತನಾಡುವೆ ಎಂದಿದ್ದಾರೆ.
ಸಂಘದ ಅಧ್ಯಕ್ಷ ರಘುನಾಥ ಅತ್ತಾವರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಹಿಮಾಲಯ ಪರ್ವತದಲ್ಲಿ 3 ಬಾರಿ ಚಾರಣ ಸಾಹಸ ಕೈಗೊಂಡ ಆದಿ ದ್ರಾವಿಡ ಸಮುದಾಯದ ಸುಮಲತಾ ಅವರನ್ನು ಸನ್ಮಾನಿಸಲಾಯಿತು.
ಅತಿಥಿಯಾಗಿ ಮೇಯರ್ ಪ್ರೇಮಾನಂದ ಶೆಟ್ಟಿ, ಸಂಘದ ಗೌರವಾಧ್ಯಕ್ಷ ಶೇಖರ ಬಲ್ಲಾಳ್‌ಬಾಗ್, ಆರಾಧನಾ ಸಮಿತಿ ಅಧ್ಯಕ್ಷ ಜಯೇಂದ್ರ ಕೋಟ್ಯಾನ್, ಜೆಡಿಎಸ್ ಮಹಿಳಾ ಘಟಕದ ಜಿಲ್ಲಾಧ್ಯಕ್ಷ ಸುಮತಿ ಹೆಗ್ಡೆ, ಕಾರ್ಪೊರೇಟರ್ ಮನೋಜ್ ಕುಮಾರ್, ಚೈತನ್ಯ ಸಹಕಾರಿ ಸಂಘದ ಅಧ್ಯಕ್ಷ ಕೃಷ್ಣ ಸೂಟರ್‌ಪೇಟೆ, ಸಂಘದ ಬಂಟ್ವಾಳ ತಾಲೂಕು ಅಧ್ಯಕ್ಷ ವಿಶ್ವನಾಥ, ಹಾಸನ ಜಿಲ್ಲಾಧ್ಯಕ್ಷ ಶಂಕರ್, ಕೊಡಗು ಜಿಲ್ಲಾಧ್ಯಕ್ಷ ಸೋಮಪ್ಪ ಎಚ್.ಎಂ., ಪುತ್ತೂರು ತಾಲೂಕು ಅಧ್ಯಕ್ಷ ರೋಹಿತ್, ಚಿಕ್ಕಮಗಳೂರು ಜಿಲ್ಲಾ ಉಪಾಧ್ಯಕ್ಷ ಆನಂದ, ಪುಷ್ಪಲತಾ, ಚಂದ್ರಾವತಿ ಭಾಗವಹಿಸಿದ್ದರು.
ಸಂಘದ ಪ್ರಧಾನ ಕಾರ್ಯದರ್ಶಿ ತನಿಯಪ್ಪ ಪಡ್ಡಯೂರು ಸ್ವಾಗತಿಸಿದರು. ಉಪಾಧ್ಯಕ್ಷರಾದ ಸಂಜೀವ ಕೋಟ್ಯಾನ್ ಮತ್ತು ಸುರೇಶ್ ಕೆ., ಕೋಶಾಧಿಕಾರಿ ಈಶ್ವರ, ಮುಖ್ಯ ಕಾರ್ಯಕ್ರಮ ಸಂಘಟಕ ಗಣೇಶ್ ಪ್ರಸಾದ್ ಪಿ.ಜೆ. ಉಪಸ್ಥಿತರಿದ್ದರು.







