ಅಣ್ಣಾಮಲೈ, ಸಿ.ಟಿ ರವಿಯಿಂದಾಗಿ ಮೇಕೆದಾಟು ಯೋಜನೆ ಜಾರಿಯಾಗದೆ ವಿಳಂಬವಾಗುತ್ತಿದೆ: ಸಿದ್ದರಾಮಯ್ಯ

ಚಾಮರಾಜನಗರ: ''ತಮಿಳುನಾಡಿನ ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಮೇಕೆದಾಟು ಯೋಜನೆ ಜಾರಿ ಮಾಡಬಾರದು ಎಂದು ಧರಣಿ ಕೂತಿದ್ದಾರೆ. ತಮಿಳುನಾಡಿನ ಬಿಜೆಪಿ ಉಸ್ತುವಾರಿ ಸಿ.ಟಿ ರವಿ ಅವರು ಕೂಡ ಮೇಕೆದಾಟು ವಿರುದ್ಧವಾಗಿದ್ದಾರೆ. ಹೀಗಾಗಿಯೇ ಯೋಜನೆ ಜಾರಿಯಾಗದೆ ಅನಗತ್ಯ ವಿಳಂಬವಾಗುತ್ತಿದೆ. ಈ ವಿಳಂಬವನ್ನು ವಿರೋಧಿಸಿಯೇ ಕಾಂಗ್ರೆಸ್ ಪಕ್ಷ ಈ ತಿಂಗಳ 9ನೇ ತಾರೀಖಿನಿಂದ ಮೇಕೆದಾಟು ಇಂದ ಬೆಂಗಳೂರು ವರೆಗೆ ಪಾದಯಾತ್ರೆ ಹಮ್ಮಿಕೊಂಡಿದೆ'' ಎಂದು ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.
ಚಾಮರಾಜನಗರದಲ್ಲಿ ಇಂದು ಆಯೋಜಿಸಿದ್ದ ಮೇಕೆದಾಟು ಯೋಜನೆ ಜಾರಿ ಕುರಿತಾದ ಜನಜಾಗೃತಿ ಸಭೆ ಮತ್ತು ಕಾಂಗ್ರೆಸ್ ಪಕ್ಷದ ಸದಸ್ಯತ್ವ ನೋಂದಣಿ ಅಭಿಯಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
''ಒಂದು ಸಾಮಾನ್ಯ ವರ್ಷದಲ್ಲಿ ಕರ್ನಾಟಕದಿಂದ ತಮಿಳುನಾಡಿಗೆ 177.25 ಟಿ.ಎಂ.ಸಿ ಕಾವೇರಿ ನೀರು ಹರಿಸಬೇಕು ಎಂದು ಸುಪ್ರೀಂ ಕೋರ್ಟ್ ಆದೇಶ ಇದೆ. ಇದನ್ನು ಬಿಟ್ಟರೆ ತಮಿಳುನಾಡಿಗೆ ಕಾವೇರಿ ನೀರಿನ ವಿಚಾರದಲ್ಲಿ ತಕರಾರು ಮಾಡಲು ಬೇರೆ ಯಾವುದೇ ರೀತಿಯ ಕಾನೂನು ಹಕ್ಕಿಲ್ಲ. ಪ್ರತೀ ವರ್ಷ ಸುಮಾರು 200 ಟಿ.ಎಂ.ಸಿ ನೀರು ಸಮುದ್ರ ಪಾಲಾಗುವ ಮೂಲಕ ವ್ಯರ್ಥವಾಗುತ್ತಿದೆ. ಹೀಗೆ ವ್ಯರ್ಥವಾಗುವ ನೀರನ್ನು ಕುಡಿಯುವ ಮತ್ತು ವಿದ್ಯುತ್ ಉತ್ಪಾದನೆಗೆ ಬಳಕೆ ಮಾಡಿಕೊಳ್ಳುವ ಉದ್ದೇಶದಿಂದ ಮೇಕೆದಾಟು ಯೋಜನೆ ರೂಪಿಸಲಾಗಿದೆ. ವಿದ್ಯುತ್ ಉತ್ಪಾದನೆ ಆದ ಮೇಲೆ ಆ ನೀರು ಕೂಡ ತಮಿಳುನಾಡಿಗೆ ಹೋಗುತ್ತದೆ, ಅದೂ ಅವರಿಗೆ ಇನ್ನೊಂದು ಲಾಭದಾಯಕ ಅಂಶ'' ಎಂದು ತಿಳಿಸಿದರು .
''ಮೇಕೆದಾಟು ಯೋಜನೆ ಜಾರಿ ಮಾಡದಂತೆ ತಮಿಳುನಾಡಿನ ಸರ್ಕಾರ ಸುಪ್ರೀಂ ಕೋರ್ಟ್ ಮೋರೆ ಹೋಗಿದ್ದರು ಕೂಡ ನ್ಯಾಯಾಲಯ ಅವರ ಮನವಿಯನ್ನು ಪುರಸ್ಕರಿಸಿಲ್ಲ. ತಮಿಳುನಾಡು ಸರ್ಕಾರ ಕೇವಲ ರಾಜಕೀಯ ಉದ್ದೇಶಕ್ಕಾಗಿ ಯೋಜನೆಗೆ ತಕರಾರು ಮಾಡುತ್ತಿದೆ. ತಮಿಳುನಾಡಿನ ಮಾತು ಕೇಳಿಕೊಂಡು ಕೇಂದ್ರ ಸರ್ಕಾರ ಡ್ಯಾಂ ನಿರ್ಮಾಣಕ್ಕೆ ಅನುಮತಿ ಕೊಡುತ್ತಿಲ್ಲ'' ಎಂದು ದೂರಿದರು.
ಹೇಮಾವತಿ, ಕಬಿನಿ, ಕೆಆರ್‌ಎಸ್ ನಲ್ಲಿ ನೀರಿದ್ದರೆ ಮಾತ್ರ ಚಾಮರಾಜನಗರ, ಮೈಸೂರು, ತುಮಕೂರು, ಮಂಡ್ಯ ಜಿಲ್ಲೆಗೆ ನೀರು ಸಿಗೋದು. ಹೀಗಾಗಿ ಮನೆಗೊಂದು ಆಳಿನಂತೆ ಪಾದಯಾತ್ರೆಯಲ್ಲಿ ಭಾಗವಹಿಸಬೇಕು ಎಂದು ತಮ್ಮಲ್ಲಿ ಮನವಿ ಮಾಡುತ್ತೇನೆ ಎಂದರು.









