ದ.ಕ.ಜಿಲ್ಲೆ: ಜ.3ರಿಂದ ವಿದ್ಯಾರ್ಥಿಗಳಿಗೆ ಲಸಿಕೆ ನೀಡಲು ಸಿದ್ಧತೆ

ಮಂಗಳೂರು, ಜ.2: ಸರಕಾರದ ಸೂಚನೆಯಂತೆ ದ.ಕ.ಜಿಲ್ಲಾಡಳಿತವು 15ರಿಂದ18 ವರ್ಷ ಪ್ರಾಯದೊಳಗಿನ ವಿದ್ಯಾರ್ಥಿಗಳಿಗೆ ಲಸಿಕೆ ನೀಡಲು ಸಿದ್ಧತೆ ನಡೆಸಿದೆ. ಜಿಲ್ಲೆಯಲ್ಲಿ ಸುಮಾರು 87 ಸಾವಿರದಷ್ಟು ಕೋವ್ಯಾಕ್ಸಿನ್ ಲಸಿಕೆ ಸಂಗ್ರಹವಿದ್ದು, ಲಸಿಕೆಯ ಕೊರತೆಯಾಗದಂತೆ ಆರೋಗ್ಯ ಇಲಾಖೆ ಮುನ್ನೆಚ್ಚರಿಕೆ ವಹಿಸಿದೆ.
ದ.ಕ.ಜಿಲ್ಲೆಯಲ್ಲಿ 15ರಿಂದ 18 ವರ್ಷ ಪ್ರಾಯದೊಳಗಿನ 1,01,549 ವಿದ್ಯಾರ್ಥಿಗಳಿದ್ದಾರೆ. ಆ ಪೈಕಿ 61 ಸಾವಿರ ವಿದ್ಯಾರ್ಥಿಗಳು ಮಂಗಳೂರು ತಾಲೂಕಿನಲ್ಲಿದ್ದರೆ, ಉಳಿದ 40 ಸಾವಿರ ವಿದ್ಯಾರ್ಥಿಗಳು ಜಿಲ್ಲೆಯ ಇತರ ತಾಲೂಕುಗಳಲ್ಲಿದ್ದಾರೆ. 63,500 ವಿದ್ಯಾರ್ಥಿಗಳು ಪಿಯು ವಿಭಾಗದಲ್ಲಿದ್ದರೆ, ಐಟಿಐ, ಡಿಪ್ಲೊಮಾ ಇತರ ಕೋರ್ಸ್‌ನಲ್ಲಿ ಇರುವ ವಿದ್ಯಾರ್ಥಿಗಳ ಸಂಖ್ಯೆ 3 ಸಾವಿರದಷ್ಟಿದೆ ಎಂದು ಆರೋಗ್ಯ ಇಲಾಖೆಯ ಮೂಲಗಳು ತಿಳಿಸಿವೆ.
ಶಾಲೆಯಿಂದ ಹೊರಗುಳಿದ ವಿದ್ಯಾರ್ಥಿಗಳನ್ನು ಪತ್ತೆ ಹಚ್ಚುವ ಕೆಲಸಕ್ಕೆ ಗ್ರಾಪಂಗಳ ಪಿಡಿಒ ಮೂಲಕ ಯೋಜನೆ ರೂಪಿಸಲಾಗಿದೆ. ಹತ್ತಿರದ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಲಸಿಕೆ ಪಡೆದುಕೊಳ್ಳಲು ಸೂಚಿಸಲಾಗಿದೆ ಎಂದು ಆರೋಗ್ಯ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.
ಜ.3ರಂದು ವಿದ್ಯಾರ್ಥಿಗಳ ಲಸಿಕೆಗೆ ಎಲ್ಲಾ ಸಿದ್ಧತೆಗಳನ್ನು ಮಾಡಲಾಗಿದೆ. ಕೋವ್ಯಾಕ್ಸಿನ್ ಸಂಗ್ರಹ ಕೂಡ ಸಾಕಷ್ಟು ಪ್ರಮಾಣದಲ್ಲಿದೆ. ಜಿಲ್ಲೆ, ತಾಲೂಕು ಮಟ್ಟದಲ್ಲಿ ಆರೋಗ್ಯ ಇಲಾಖೆ ಸಂಪೂರ್ಣ ಸಿದ್ಧತೆ ಮಾಡಿಕೊಂಡು ಲಸಿಕೆ ನೀಡುವ ಕೆಲಸ ನಿರ್ವಹಿಸಲಿದೆ ಎಂದು ದ.ಕ. ಜಿಲ್ಲಾ ಆರೋಗ್ಯಾಧಿಕಾರಿ ಡಾ. ಕಿಶೋರ್ ಕುಮಾರ್ ತಿಳಿಸಿದ್ದಾರೆ.
ಕೋವಿನ್ ಆ್ಯಪ್: ಜ.3ರಿಂದ ವಿದ್ಯಾರ್ಥಿಗಳಿಗೆ ಲಸಿಕೆ ನೀಡುವ ಹಿನ್ನೆಲೆಯಲ್ಲಿ ನೋಂದಣಿಗಾಗಿ ಜ.1ರಿಂದಲೇ ಕೋವಿನ್ ಆ್ಯಪ್ ತೆರೆಯಲಾಗಿದೆ. ವಿದ್ಯಾರ್ಥಿಗಳು ಸ್ವಯಂಪ್ರೇರಿತರಾಗಿ ನೋಂದಣಿ ಮಾಡಿಕೊಳ್ಳಬಹುದು ಅಥವಾ ಜ.3ರಂದು ಶಾಲೆ, ಕಾಲೇಜಿಗೆ ತೆರಳಿದಾಗ ಆರೋಗ್ಯ ಇಲಾಖೆ ಸಿಬ್ಬಂದಿ ಮೂಲಕ ನೋಂದಣಿ ಮಾಡಿಸಿಕೊಳ್ಳಬಹುದು.ನೇರವಾಗಿ ವಿದ್ಯಾರ್ಥಿಗಳ ಮೊಬೈಲ್ ಅಥವಾ ಅವರ ಹೆತ್ತವರ ಮೊಬೈಲ್‌ಗೆ ಮೆಸೇಜ್ ಕಳುಹಿಸಲಾಗುತ್ತದೆ. 28 ದಿನಗಳ ಬಳಿಕ ಮತ್ತೊಂದು ಡೋಸ್‌ಗಾಗಿ ಮಾಹಿತಿ ರವಾನೆ ಮಾಡಲಾಗುತ್ತದೆ. ವಿದ್ಯಾರ್ಥಿಗಳ ಹೆತ್ತವರ ಸಭೆ ನಡೆಸಿ ಮಾಹಿತಿ ನೀಡಲಾಗಿದೆ.
ವಿದ್ಯಾರ್ಥಿಗಳಿಗಾಗಿ ಕೋವಿನ್ ಆ್ಯಪ್‌ನಲ್ಲಿ ವಿಶೇಷ ಬದಲಾವಣೆ ಮಾಡಲಾಗಿದೆ. ಒಟಿಪಿ ಇಲ್ಲದೇ ಲಸಿಕೆ ನೀಡಲಾಗುತ್ತದೆ. ವಿದ್ಯಾರ್ಥಿಗಳಿಗೆ ಹೆತ್ತವರ ಮೊಬೈಲ್ ಸಂಖ್ಯೆ, ಆಧಾರ್ ಕಾರ್ಡ್, ಸ್ಕೂಲ್ ಐಡಿ ಆಧಾರದಲ್ಲಿ ಲಸಿಕೆ ನೀಡುವ ವ್ಯವಸ್ಥೆ ನಡೆಯಲಿದೆ. ಕೋವ್ಯಾಕ್ಸಿನ್ ಲಸಿಕೆಯನ್ನು ಮೊದಲ ಡೋಸ್ ನೀಡಿದ 28 ದಿನಗಳ ಬಳಿಕ ಮತ್ತೊಂದು ಡೋಸ್ ಲಸಿಕೆಯನ್ನು ನೀಡುವ ವ್ಯವಸ್ಥೆ ಮಾಡಲಾಗುತ್ತದೆ ಎಂದು ಆರೋಗ್ಯ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.
*ಜ.10ರಂದು ಬೂಸ್ಟರ್ ಲಸಿಕೆ: ಜಿಲ್ಲೆಯಲ್ಲಿ 50 ಸಾವಿರದಷ್ಟು ಆರೋಗ್ಯ ಕ್ಷೇತ್ರದವರು ಹಾಗೂ 14 ಸಾವಿರದಷ್ಟು ಫ್ರಂಟ್‌ಲೈನ್ ವರ್ಕರ್‌ಗಳಿಗೆ ಬೂಸ್ಟರ್ ಲಸಿಕೆಯು ಜ.10ರಂದು ನೀಡಲಾಗುತ್ತದೆ. ಲಸಿಕೆಯ ಮೊದಲ ಎರಡು ಡೋಸ್‌ಗಳನ್ನು ತೆಗೆದುಕೊಂಡು 9 ತಿಂಗಳು ದಾಟಿದವರು ಇದನ್ನು ಪಡೆಯಲು ಅರ್ಹರಾಗುತ್ತಾರೆ.
*ದ.ಕ. ಜಿಲ್ಲೆಯಲ್ಲಿ 1,10,000 ಮಕ್ಕಳಿಗೆ ಲಸಿಕೆ ನೀಡುವ ಗುರಿ ಇಟ್ಟುಕೊಳ್ಳಲಾಗಿದ್ದು, ಜ.3ರಂದು 21,350 ಮಂದಿಗೆ ನೀಡುವ ವ್ಯವಸ್ಥೆ ಮಾಡಲಾಗಿದೆ. ಮಂಗಳೂರಿನಲ್ಲಿ ಜ.3ರಂದು 7 ಸಾವಿರ ಮಂದಿಗೆ ಲಸಿಕೆ ನೀಡಲಾಗುತ್ತದೆ. ಇದರಲ್ಲಿ ನಗರ ಪಾಲಿಕೆ ವ್ಯಾಪ್ತಿಯ 2,800 ಹಾಗೂ ಗ್ರಾಮಾಂತರ ಭಾಗದಲ್ಲಿ 4,200 ಮಂದಿ ಸೇರಿದ್ದಾರೆ. ಬಂಟ್ವಾಳದಲ್ಲಿ 13,900 ಗುರಿ ನಿಗದಿಯಾಗಿದ್ದು, ಮೊದಲ ದಿನ 3,750 ಮಂದಿಗೆ ಲಸಿಕೆ ನೀಡಲಾಗುತ್ತದೆ. ಪುತ್ತೂರಿನಲ್ಲಿ 15,200 ಮಂದಿಯ ಪೈಕಿ ಮೊದಲ ದಿನ 3,200 ಮತ್ತು ಸುಳ್ಯದ 6,000 ಮಂದಿಯ ಪೈಕಿ ಮೊದಲ ದಿನ 3400 ಮಂದಿಗೆ ಲಸಿಕೆ ನೀಡಲಾಗುತ್ತದೆ.







