ಉಡುಪಿ: ರವಿವಾರ 54 ಮಂದಿಗೆ ಕೋವಿಡ್ ಸೋಂಕು ದೃಢ
ಉಡುಪಿ, ಜ.2: ದೇಶದಲ್ಲಿ ಒಮೈಕ್ರಾನ್ ವೈರಸ್‌ನ ಪ್ರಭಾವ ವ್ಯಾಪಕವಾಗಿ ಕಂಡುಬರುತ್ತಿರುವಂತೆ ಉಡುಪಿ ಜಿಲ್ಲೆಯಲ್ಲೂ ಕೋವಿಡ್ ಸೋಂಕಿತರ ಸಂಖ್ಯೆಯಲ್ಲಿ ಹಠಾತ್ ಹೆಚ್ಚಳ ಕಂಡುಬರುತ್ತಿದೆ. ರವಿವಾರ ಜಿಲ್ಲೆಯಲ್ಲಿ ಒಟ್ಟು 54 ಮಂದಿ ಕೋವಿಡ್-19ಕ್ಕೆ ಪಾಸಿಟಿವ್ ಬಂದಿದ್ದಾರೆ. ದಿನದಲ್ಲಿ 8 ಮಂದಿ ಗುಣಮುಖರಾದರೆ, ಸೋಂಕಿಗೆ ಚಿಕಿತ್ಸೆಯಲ್ಲಿರುವವರ ಸಂಖ್ಯೆಯಲ್ಲೂ ಹೆಚ್ಚಳ ಕಂಡುಬಂದಿದ್ದು 186ಕ್ಕೇರಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ನಾಗಭೂಷಣ ಉಡುಪ ತಿಳಿಸಿದ್ದಾರೆ.
ದಿನದಲ್ಲಿ ಪಾಸಿಟಿವ್ ಬಂದ 54 ಮಂದಿಯಲ್ಲಿ 34 ಮಂದಿ ಪುರುಷರಾದರೆ 20 ಮಂದಿ ಮಹಿಳೆಯರು. ಪಾಸಿಟಿವ್ ಬಂದವರಲ್ಲಿ 52 ಮಂದಿ ಉಡುಪಿ ತಾಲೂಕಿಗೆ ಸೇರಿದವರು. ಉಳಿದಿಬ್ಬರು ಕುಂದಾಪುರ ಮತ್ತು ಕಾರ್ಕಳದವರು. ಪಾಸಿಟಿವ್ ಬಂದ ಮೂವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿದರೆ ಉಳಿದ 51 ಮಂದಿಗೆ ಮನೆಯಲ್ಲೇ ಚಿಕಿತ್ಸೆ ನೀಡಲಾಗುತ್ತಿದೆ.
ಶನಿವಾರ 8 ಮಂದಿ ರೋಗದಿಂದ ಗುಣಮುಖರಾಗುವ ಮೂಲಕ ಕೊರೋನದಿಂದ ಈವರೆಗೆ ಚೇತರಿಸಿಕೊಂಡವರ ಸಂಖ್ಯೆ 76,540ಕ್ಕೇರಿದೆ. ನಿನ್ನೆ ಜಿಲ್ಲೆಯಲ್ಲಿ 5777 ಮಂದಿಗೆ ಕೋವಿಡ್ ಪರೀಕ್ಷೆ ನಡೆಸಲಾಗಿದೆ. ಜಿಲ್ಲೆಯಲ್ಲಿ ಈವರೆಗೆ ಸೋಂಕಿಗೆ ಪಾಸಿಟಿವ್ ಬಂದವರ ಸಂಖ್ಯೆ 77,205ಕ್ಕೇರಿದೆ.
48 ಮಂದಿಗೆ ಲಸಿಕೆ: ಜಿಲ್ಲೆಯಲ್ಲಿ ಇಂದು 48 ಮಂದಿ ಕೋವಿಡ್ ಲಸಿಕೆ ಸ್ವೀಕರಿಸಿದ್ದಾರೆ. ಇವರಲ್ಲಿ ಐವರು ಮೊದಲ ಡೋಸ್ ಹಾಗೂ 43 ಮಂದಿ ಎರಡನೇ ಡೋಸ್ ಲಸಿಕೆ ಪಡೆದಿದ್ದಾರೆ.







