ಎಂಇಎಸ್ ಪುಂಡಾಟಿಕೆ ಪ್ರಕರಣ: 38 ಆರೋಪಿಗಳ ಜಾಮೀನು ಅರ್ಜಿ ವಜಾಗೊಳಿಸಿದ ಕೋರ್ಟ್

ಬೆಳಗಾವಿ, ಜ. 2: ಬೆಳಗಾವಿಯ ವಿಧಾನ ಮಂಡಲ ಚಳಿಗಾಲದ ಅಧಿವೇಶನ ಸಂದರ್ಭದಲ್ಲಿ ಉದ್ಧಟತನ ಪ್ರದರ್ಶಿಸಿದ್ದ ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್) ಮುಖಂಡ ಶುಭಂ ಶೆಳ್ಕೆ ಸೇರಿ ಬಂಧಿತ 38 ಆರೋಪಿಗಳ ಜಾಮೀನು ಅರ್ಜಿಯನ್ನು ಬೆಳಗಾವಿಯ ಜಿಲ್ಲಾ ಕೋರ್ಟ್ ವಜಾಗೊಳಿಸಿದೆ.
ಪ್ರಕರಣದಡಿ ಇನ್ನೂ 22 ಆರೋಪಿಗಳ ಬಂಧನಕ್ಕೆ ಬೆಳಗಾವಿ ಪೊಲೀಸರು ಬಲೆ ಬೀಸಿದ್ದಾರೆ.
ನಿರೀಕ್ಷಣಾ ಜಾಮೀನು ಅರ್ಜಿಯೂ ವಜಾ: ಗಲಭೆ ಪ್ರಕರಣದಡಿ ನಿರೀಕ್ಷಣಾ ಜಾಮೀನು ಕೋರಿ 11 ಆರೋಪಿಗಳು ಸಲ್ಲಿಸಿದ್ದ ಜಾಮೀನು ಅರ್ಜಿಯೂ ವಜಾಗೊಂಡಿದೆ. ಮಾಜಿ ಮೇಯರ್ ಸರಿತಾ ಪಾಟೀಲ್ ಸೇರಿ 11 ಆರೋಪಿಗಳ ನಿರೀಕ್ಷಣಾ ಜಾಮೀನು ಅರ್ಜಿ ತಿರಸ್ಕೃತಗೊಂಡಿದೆ.
ಬೆಂಗಳೂರಿನಲ್ಲಿ ಶಿವಾಜಿ ಪ್ರತಿಮೆಗೆ ಅಪಮಾನ ಮಾಡಿದ್ದನ್ನು ಖಂಡಿಸಿ ಡಿ.17ರಂದು ಬೆಳಗಾವಿಯ ಸಂಭಾಜಿ ವೃತ್ತದಲ್ಲಿ ಎಂಇಎಸ್, ಶ್ರೀರಾಮಸೇನೆ ಹಿಂದೂಸ್ತಾನ್ ಸಂಘಟನೆ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದರು. ಪ್ರತಿಭಟನೆ ವೇಳೆ ಕೆಲ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿ ಹಲವು ವಾಹನಗಳ ಗಾಜುಗಳನ್ನು ಪುಡಿಗೈದಿದ್ದರು.
Next Story





