ಎಸ್ಸಿ-ಎಸ್ಟಿ ವರ್ಗದವರ ಮೀಸಲಾತಿ ಮಿತಿ ಹೆಚ್ಚಳಕ್ಕೆ ಆಗ್ರಹ
ಬೆಂಗಳೂರು, ಜ. 2: ಸರಕಾರಿ ಕಾಮಗಾರಿಗಳ ಗುತ್ತಿಗೆಯಲ್ಲಿ ಪರಿಶಿಷ್ಟ ಜಾತಿ(ಎಸ್ಸಿ) ಮತ್ತು ಪರಿಶಿಷ್ಟ ಪಂಗಡ(ಎಸ್ಟಿ)ದ ಗುತ್ತಿಗೆದಾರರಿಗೆ ಕಲ್ಪಿಸಿರುವ 50 ಲಕ್ಷ ರೂ.ವರೆಗಿನ ಮೀಸಲಾತಿ ಮಿತಿಯನ್ನು 1 ಕೋಟಿ ರೂ.ಗಳಿಗೆ ಹೆಚ್ಚಿಸುವ ಬಗ್ಗೆ ಸುಗ್ರೀವಾಜ್ಞೆ ಹೊರಡಿಸಬೇಕು ಅಥವಾ ಮುಂದಿನ ಅಧಿವೇಶನದಲ್ಲಿ ಪಾರದರ್ಶಕ ಕಾಯ್ದೆಗೆ ತಿದ್ದುಪಡಿ ಮಾಡಬೇಕು ಎಂದು ಕರ್ನಾಟಕ ರಾಜ್ಯ ಎಸ್ಸಿ-ಎಸ್ಟಿ ಗುತ್ತಿಗೆದಾರರ ಸಂಘ ಆಗ್ರಹಿಸಿದೆ.
2018-19ರ ಆಯವ್ಯಯದಲ್ಲಿ ಎಸ್ಸಿ-ಎಸ್ಟಿಗಳಿಗೆ ಗುತ್ತಿಗೆ ಮೀಸಲಾತಿ ಮಿತಿಯನ್ನು 50ಲಕ್ಷ ರೂ.ನಿಂದ 1 ಕೋಟಿ ರೂ.ಗಳಿಗೆ ಹೆಚ್ಚಿಸುವ ಘೋಷಣೆ ಮಾಡಲಾಗಿದೆ. ಅಲ್ಲದೆ, ಈ ಬಗ್ಗೆ ಸಂಘವು ಹಲವು ಬಾರಿ ಸರಕಾರಕ್ಕೆ ಮನವಿ ಮಾಡಿದ್ದರೂ ಈ ಸಂಬಂಧದ ಕಡತವನ್ನು ಸಿಎಂ ವಾಪಸ್ ಕಳುಹಿಸಿದ್ದಾರೆ. ಆದರೆ, ಕೆಆರ್‍ಐಡಿಎಲ್ ಸಂಸ್ಥೆಗೆ ‘4ಜಿ' ವಿನಾಯಿತಿ ನೀಡಿ ಕಾಮಗಾರಿಗಳ ಟೆಂಡರ್‍ನಲ್ಲಿ ಭಾಗವಹಿಸದೆ ನೇರವಾಗಿ ನೀಡಿದ್ದರಿಂದ ಸರಕಾರದ ಬೊಕ್ಕಸಕ್ಕೆ ನಷ್ಟ ಆಗುವುದನ್ನು ಮನಗಂಡು ಹೈಕೋರ್ಟ್ ತಡೆ ನೀಡಿದೆ.
ಆದರೂ, ಕೆಆರ್‍ಐಡಿಎಲ್ ಸಂಸ್ಥೆಗೆ 2 ಕೋಟಿ ರೂ.ವರೆಗಿನ ಕಾಮಗಾರಿಗಳನ್ನು ನೇರವಾಗಿ ನೀಡಲು ಪಾರದರ್ಶಕ ಕಾಯ್ದೆಗೆ ತಿದ್ದುಪಡಿ ತರುವ ಮೂಲಕ ಎಸ್ಸಿ-ಎಸ್ಟಿ ಗುತ್ತಿಗೆದಾರರಿಗೆ ಮೀಸಲಾತಿ ಹೆಚ್ಚಿಸಲು ತೀರ್ಮಾನ ಮಾಡದೆ ಅನ್ಯಾಯ ಮಾಡಲಾಗಿದೆ. ಇದೇ ವಿಷಯಕ್ಕೆ ಸಂಬಂಧಿಸಿದಂತೆ ಪರಿಷತ್ ಸದಸ್ಯ ಆರ್.ಬಿ.ತಿಮ್ಮಾಪುರ್ ಅವರು ಡಿ.22ರಂದು ಬೆಳಗಾವಿ ಅಧಿವೇಶನದಲ್ಲಿ ಕೇಳಿದ ಪ್ರಶ್ನೆಗೆ ಲೋಕೋಪಯೋಗಿ ಸಚಿವ ಸಿ.ಸಿ.ಪಾಟೀಲ್ ಅವರು ತಪ್ಪು ಉತ್ತರ ನೀಡುವ ಮೂಲಕ ಸದನವನ್ನು ತಪ್ಪು ದಾರಿಗೆ ಎಳೆದಿದ್ದಾರೆ ಎಂದು ಸಂಘದ ಅಧ್ಯಕ್ಷ ಎನ್.ಮಹದೇವಸ್ವಾಮಿ ದೂರಿದ್ದಾರೆ.
ತಪ್ಪು ಮಾಹಿತಿ ನೀಡುವ ಮೂಲಕ ಸದನವನ್ನು ತಪ್ಪುದಾರಿಗೆಳೆದ ಲೋಕೋಪಯೋಗಿ ಸಚಿವರಿಗೆ ಸೂಕ್ತ ನಿರ್ದೇಶನ ನೀqಬೇಕು. ಅಲ್ಲದೆ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಗುತ್ತಿಗೆದಾರರ ಅನ್ಯಾಯ ಆಗದಂತೆ ಸರಕಾರಿ ಕಾಮಗಾರಿಗಳ ಗುತ್ತಿಗೆ ಮೀಸಲಾತಿ ಮಿತಿಯನ್ನು 1ಕೋಟಿ ರೂ.ಗಳಿಗೆ ಹೆಚ್ಚಿಸಲು ಕ್ರಮ ವಹಿಸಬೇಕು ಎಂದು ಸಭಾಪತಿ ಬಸವರಾಜ ಹೊರಟ್ಟಿ ಅವರಿಗೆ, ಎನ್.ಮಹದೇವಸ್ವಾಮಿ ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.







