ಅಸ್ಸಾಂ: ಆಡು ಕಳವುಗೈದ ಶಂಕೆಯಲ್ಲಿ ವ್ಯಕ್ತಿಯನ್ನು ಥಳಿಸಿ ಹತ್ಯೆಗೈದ ಗುಂಪು; ಇಬ್ಬರು ವಶಕ್ಕೆ

ಗೋಲಾಘಾಟ್(ಅಸ್ಸಾಂ), ಜ. 2: ಆಡು ಕಳವುಗೈದ ಶಂಕೆಯಲ್ಲಿ 45 ವರ್ಷದ ವ್ಯಕ್ತಿಯೋರ್ವನನ್ನು ಮೂವರು ಸೇರಿ ಥಳಿಸಿ ಹತ್ಯೆಗೈದ ಘಟನೆ ಗೋಲಾಘಾಟ್ ಜಿಲ್ಲೆಯ ಕುಗ್ರಾಮವೊಂದರಲ್ಲಿ ಸಂಭವಿಸಿದೆ. ದೇರ್ಗಾಂವ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ಮಮರಾನಿ ಗ್ರಾಮದಲ್ಲಿ ಶನಿವಾರ ರಾತ್ರಿ ಸಂಭವಿಸಿದ ಈ ಘಟನೆಗೆ ಸಂಬಂಧಿಸಿ ಇಬ್ಬರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ರವಿವಾರ ತಿಳಿಸಿದ್ದಾರೆ. ದಾಳಿ ನಡೆದ ಮೊದಲ 12 ಗಂಟೆಗಳಲ್ಲಿ ಯಾವುದೇ ದೂರು ದಾಖಲಾಗಿಲ್ಲ ಎಂದು ದೇರ್ಗಾಂವ್ ಪೊಲೀಸ್ ಠಾಣೆಯ ಉಸ್ತುವಾರಿ ಅಧಿಕಾರಿ ಪ್ರದೀಪ್ ಚೌಧರಿ ಹೇಳಿದ್ದಾರೆ.
‘‘ಸಂಜಯ್ ದಾಸ್ ಎಂದು ಗುರುತಿಸಲಾದ ಸಂತ್ರಸ್ತನ ಕುಟುಂಬದ ಸದಸ್ಯರು ಪೊಲೀಸ್ ಠಾಣೆಗೆ ಭೇಟಿ ನೀಡಿದ್ದಾರೆ. ಅಲ್ಲದೆ, ದೂರು ದಾಖಲಿಸಿದ್ದಾರೆ. ನಾವು ದೂರು ದಾಖಲಿಸಿಕೊಂಡಿದ್ದೇವೆ’’ ಎಂದು ಅವರು ತಿಳಿಸಿದ್ದಾರೆ. ಸಂಜಯ್ ದಾಸ್ ಅವರು ಅದೇ ಗ್ರಾಮದಲ್ಲಿ ವಾಸಿಸುತ್ತಿರುವ ಮೂವರಿಂದ ದಾಳಿಗೊಳಗಾದರು. ಗಾಯಗೊಂಡ ದಾಸ್ ಅವರನ್ನು ದೇರ್ಗಾಂವ್ನ ನಾಗರಿಕ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ, ವೈದ್ಯರು ಜೊರ್ಹಾತ್ ವೈದ್ಯಕೀಯ ಕಾಲೇಜು ಹಾಗೂ ಆಸ್ಪತ್ರೆ (ಜೆಎಂಸಿಎಚ್)ಗೆ ಶಿಫಾರಸು ಮಾಡಿದರು ಎಂದು ಅವರು ಹೇಳಿದ್ದಾರೆ.
ಆದರೆ, ಗಂಭೀರ ಗಾಯಗೊಂಡಿದ್ದ ದಾಸ್ ಅವರು ರವಿವಾರ ಮುಂಜಾನೆ ಮೃತಪಟ್ಟರು. ಪ್ರಕರಣಕ್ಕೆ ಸಂಬಂಧಿಸಿ ಇಬ್ಬರನ್ನು ವಶಕ್ಕೆ ತೆಗೆದುಕೊಳಲಾಗಿದೆ. ಇನ್ನಷ್ಟು ಮಾಹಿತಿ ಕಲೆ ಹಾಕಲು ವಿಚಾರಣೆ ನಡೆಸಲಾಗುತ್ತಿದೆ ಎಂದು ಚೌಧರಿ ತಿಳಿಸಿದ್ದಾರೆ. ‘‘ಮಾಹಿತಿಯ ಪ್ರಕಾರ, ಆರೋಪಿಯ ಆಡು ನಾಪತ್ತೆಯಾಗಿತ್ತು. ಆಡನ್ನು ಸಂಜಯ್ ದಾಸ್ ಕಳವುಗೈದಿದ್ದಾನೆ ಎಂದು ಆತ ಶಂಕಿಸಿದ್ದ. ಆಡಿನ ಮಾಲಕ ಹಾಗೂ ಆತನ ಗೆಳೆಯರು ಸೇರಿ ದಾಸ್ಗೆ ಥಳಿಸಿದ್ದಾರೆ. ಗಂಭೀರ ಗಾಯಗೊಂಡ ಸಂಜಯ್ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ’’ ಎಂದು ಚೌಧರಿ ತಿಳಿಸಿದ್ದಾರೆ.







