ಗಡಿ ನಿಯಂತ್ರಣ ರೇಖೆಯಲ್ಲಿ ಸೇನೆ ಗುಂಡಿಗೆ ಪಾಕ್ ಯೋಧ ಬಲಿ: ಮೃತ ದೇಹ ಸ್ವೀಕರಿಸಲು ಪಾಕ್ ಸೇನಾ ಪಡೆಗೆ ಮನವಿ

ಶ್ರೀಗನರ, ಜ. 2: ಜಮ್ಮು ಹಾಗೂ ಕಾಶ್ಮೀರದ ಕುಪ್ವಾರದ ಕೇರನ್ ವಲಯದ ಗಡಿ ನಿಯಂತ್ರಣ ರೇಖೆಯಲ್ಲಿ ಶನಿವಾರ ಒಳ ನುಸುಳಲು ಪ್ರಯತ್ನಿಸಿದ ಸಂದರ್ಭ ಬಲಿಯಾದ ಪಾಕ್ ಯೋಧನ ಮೃತದೇಹವನ್ನು ಸ್ವೀಕರಿಸುವಂತೆ ಭಾರತೀಯ ಸೇನಾ ಪಡೆ ರವಿವಾರ ಪಾಕಿಸ್ತಾನದ ಸೇನಾ ಪಡೆಯಲ್ಲಿ ವಿನಂತಿಸಿದೆ.
ಕರೇನ್ ವಲಯದ ಗಡಿ ನಿಯಂತ್ರಣ ರೇಖೆಯಲ್ಲಿ ಬ್ಯಾಟ್ (ಬಿಎಟಿ-ಪಾಕಿಸ್ತಾನ ಸೇನೆಯ ಗಡಿ ಕಾರ್ಯ ತಂಡ)ನ ಯೋಧ ಶನಿವಾರ ಒಳ ನುಸುಳಲು ಪ್ರಯತ್ನಿಸಿದ್ದ. ಸೇನಾ ಪಡೆ ಕೂಡಲೇ ಜಾಗೃತಗೊಂಡು ಈ ಪ್ರಯತ್ನವನ್ನು ವಿಫಲಗೊಳಿಸಿತು. ಅಲ್ಲದೆ, ಯೋಧನನ್ನು ಗುಂಡು ಹಾರಿಸಿ ಹತ್ಯೆಗೈದಿತು ಎಂದು ಜಿಒಸಿ 28 ಇನ್ಫೆಂಟ್ರಿ ವಿಭಾಗದ ಮೇಜರ್ ಜನರಲ್ ಎ.ಎಸ್. ಪೆಂಧಾರ್ಕರ್ ತಿಳಿಸಿದ್ದಾರೆ.
ಮೃತಪಟ್ಟ ಯೋಧನನ್ನು ಮುಹಮ್ಮದ್ ಶಬೀರ್ ಮಲಿಕ್ ಎಂದು ಗುರುತಿಸಲಾಗಿದೆ. ಈತ ಪಾಕಿಸ್ತಾನದ ಸೇನೆಯ ಗಡಿ ಕಾರ್ಯ ತಂಡ ಅಥವಾ ಬ್ಯಾಟ್ (ಬಿಎಟಿ)ನ ಸದಸ್ಯನಾಗಿರುವ ಸಾಧ್ಯತೆ ಇದೆ ಎಂದು ಅವರು ಹೇಳಿದ್ದಾರೆ. ಒಳನುಸುಳುವ ಪ್ರಯತ್ನವನ್ನು ಮೊದಲೇ ಗುರುತಿಸಲಾಯಿತು ಎಂದು ಪೆಂಧಾರ್ಕರ್ ಪ್ರತಿಪಾದಿಸಿದ್ದಾರೆ. ‘‘ಹೊಂಚು ದಾಳಿ ನಡೆಸಲಾಯಿತು ಹಾಗೂ ಒಳನುಸುಳುಕೋರನನ್ನು ಹತ್ಯೆಗೈಯಲಾಯಿತು. ಆತನ ಮೃತದೇಹ ಒಂದು ಎ.ಕೆ. ರೈಫಲ್ ಹಾಗೂ 7 ಗ್ರೆನೇಡ್ಗಳೊಂದಿಗೆ ಪತ್ತೆಯಾಗಿದೆ. ಈ ಪ್ರದೇಶದಲ್ಲಿ ಕಣ್ಗಾವಲು ಮುಂದುವರಿದಿದೆ’’ ಎಂದು ಅವರು ಹೇಳಿದ್ದಾರೆ.
‘‘ಪಾಕಿಸ್ತಾನ ಗಡಿ ಭಯೋತ್ಪಾದನೆ ಮುಂದುವರಿಸಿರುವುದಕ್ಕೆ ಇದು ಸ್ಪಷ್ಟ ಸೂಚನೆ. ಪಾಕಿಸ್ತಾನ ಸೇನೆಯ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿದ್ದೇವೆ. ಹತ್ಯೆಯಾದ ಯೋಧನ ಮೃತದೇಹವನ್ನು ಸ್ವೀಕರಿಸುವಂತೆ ವಿನಂತಿಸಿದ್ದೇವೆ’’ ಎಂದು ಪೆಂಧಾರ್ಕರ್ ಹೇಳಿದ್ದಾರೆ. ಆತನಿಗೆ ಸೇರಿದ ವಸ್ತುಗಳ ಶೋಧ ಕಾರ್ಯಾಚರಣೆ ಸಂದರ್ಭ ಪಾಕಿಸ್ತಾನದ ಗುರುತು ಪತ್ರ ಹಾಗೂ ಪಾಕಿಸ್ತಾನ ಆರೋಗ್ಯ ಸಚಿವಾಲಯ ನೀಡಿರುವ ಕೋವಿಡ್ ಲಸಿಕೆ ಪ್ರಮಾಣ ಪತ್ತ ಪತ್ತೆಯಾಗಿರುವುದು ಆತ ಪಾಕಿಸ್ತಾನದ ಪ್ರಜೆ ಎಂಬುದನ್ನು ಬಹಿರಂಗಪಡಿಸಿದೆ. ಕಾರ್ಡ್ ಒಂದರಲ್ಲಿ ಆತ ಪಾಕ್ ಶಸಸ್ತ್ರ ಪಡೆಯ ಸಮವಸ್ತ್ರ ಧರಿಸಿರುವುದು ಕಂಡು ಬಂದಿದೆ ಎಂದು ಅವರು ಹೇಳಿದ್ದಾರೆ.







