ಇಡಬ್ಲುಎಸ್ ಕೋಟಾ ನಿಯಮಗಳು ಮುಂದಿನ ವರ್ಷ ಬದಲಾವಣೆ: ಕೇಂದ್ರ
ದಿಲ್ಲಿಯ ಕಿರಿಯ ವೈದ್ಯರ ಪ್ರತಿಭಟನೆ ಅಂತ್ಯ

ಹೊಸದಿಲ್ಲಿ,ಜ.2: ದೇಶಾದ್ಯಂತ ವೈದ್ಯಕೀಯ ಕಾಲೇಜುಗಳಲ್ಲಿ ಪ್ರವೇಶಕ್ಕಾಗಿ ಆರ್ಥಿಕವಾಗಿ ಹಿಂದುಳಿದ ವರ್ಗ (ಇಡಬ್ಲುಎಸ್)ಗಳಿಗೆ ಮೀಸಲಾತಿ ಫಲಾನುಭವಿಗಳನ್ನು ಗುರುತಿಸಲು ಹಾಲಿ ಅಸ್ತಿತ್ವದಲ್ಲಿರುವ ಮಾನದಂಡಗಳನ್ನು ಈ ಶೈಕ್ಷಣಿಕ ವರ್ಷಕ್ಕೂ ಉಳಿಸಿಕೊಳ್ಳಲಾಗುವುದು ಎಂದು ಸರಕಾರವು ಶುಕ್ರವಾರ ಸರ್ವೋಚ್ಚ ನ್ಯಾಯಾಲಯಕ್ಕೆ ಸಲ್ಲಿಸಿರುವ ಅಫಿಡವಿಟ್‌ನಲ್ಲಿ ತಿಳಿಸಿದ್ದು, ವಿವರಗಳು ರವಿವಾರ ಬೆಳಿಗ್ಗೆಯಷ್ಟೇ ಬಹಿರಂಗಗೊಂಡಿವೆ.
ಇಡಬ್ಲುಎಸ್ ಕೋಟಾ ಕುರಿತು ವಿವಾದವು ನೀಟ್ ಪ್ರವೇಶಗಳ ಮೇಲೆ ಪ್ರತಿಕೂಲ ಪರಿಣಾಮವನ್ನು ಬೀರಿತ್ತು. ಸರಕಾರದ ಅಫಿಡವಿಟ್‌ನ ಹಿನ್ನೆಲೆಯಲ್ಲಿ ದಿಲ್ಲಿಯಲ್ಲಿಯ ಕಿರಿಯ ವೈದ್ಯರು ನೀಟ್ ಕೌನ್ಸೆಲಿಂಗ್ ಮತ್ತು ಪ್ರವೇಶಗಳಲ್ಲಿ ವಿಳಂಬವನ್ನು ವಿರೋಧಿಸಿ ಕಳೆದ ವಾರದಿಂದ ನಡೆಸುತ್ತಿದ್ದ ತಮ್ಮ ಪ್ರತಿಭಟನೆಯನ್ನು ಹಿಂದೆಗೆದುಕೊಂಡಿದ್ದಾರೆ. ನೀಟ್ ಅಭ್ಯರ್ಥಿಗಳಿಗೆ ಪ್ರವೇಶಗಳು ಮತ್ತು ಕಾಲೇಜುಗಳ ಹಂಚಿಕೆ ಪ್ರಕ್ರಿಯೆ ನಡೆಯುತ್ತಿರುವ ಈ ಸಂದರ್ಭದಲ್ಲಿ ನಿಯಮಗಳಲ್ಲಿ ಬದಲಾವಣೆಯು ತೊಡಕುಗಳಿಗೆ ಕಾರಣವಾಗುತ್ತದೆ ಎಂದು ಸರಕಾರವು ತಿಳಿಸಿದೆ. ಇಡಬ್ಲುಎಸ್ ನಿಯಮಗಳಲ್ಲಿ ಪರಿಷ್ಕರಣೆಗಳನ್ನು ಮುಂದಿನ ವರ್ಷದಿಂದ ಅನ್ವಯಿಸಬಹುದಾಗಿದೆ ಎಂದು ಅದು ಹೇಳಿದೆ.
ಪರಿಷ್ಕೃತ ಇಡಬ್ಲುಎಸ್ ಮಾನದಂಡಗಳಲ್ಲಿ ವಿವಾದಾತ್ಮಕ ವಾರ್ಷಿಕ ಎಂಟು ಲ.ರೂ.ಗಳ ಆದಾಯವನ್ನು ಉಳಿಸಿಕೊಳ್ಳಲಾಗಿದೆ,ಆದರೆ ಆದಾಯವನ್ನು ಪರಿಗಣಿಸದೆ ಐದು ಎಕರೆ ಅಥವಾ ಹೆಚ್ಚಿನ ಕೃಷಿಭೂಮಿಯನ್ನು ಹೊಂದಿರುವ ಕುಟುಂಬಗಳನ್ನು ಮೀಸಲಾತಿ ಸೌಲಭ್ಯದಿಂದ ಹೊರಗಿರಿಸಲಾಗಿದೆ.
ಅಖಿಲ ಭಾರತ ಕೋಟಾದಲ್ಲಿ ಸಂಭಾವ್ಯ ಇಡಬ್ಲುಎಸ್ ಫಲಾನುಭವಿಗಳನ್ನು ಗುರುತಿಸಲು ಒಬಿಸಿಗಳಲ್ಲಿ ಕೆನೆ ಪದರವನ್ನು ನಿರ್ಧರಿಸಲು ಬಳಸಲಾಗುವ ಎಂಟು ಲ.ರೂ.ಗಿಂತ ಕಡಿಮೆ ಆದಾಯದ ಅದೇ ಮಾನದಂಡವನ್ನು ಏಕೆ ನಿಗದಿಗೊಳಿಸಲಾಗಿದೆ ಎಂದು ಸರ್ವೋಚ್ಚ ನ್ಯಾಯಾಲಯವು ಕೇಂದ್ರವನ್ನು ಪ್ರಶ್ನಿಸಿದ್ದು,ಅದಕ್ಕೆ ಉತ್ತರವಾಗಿ ಈ ಅಫಿಡವಿಟ್ ಅನ್ನು ಸಲ್ಲಿಸಲಾಗಿದೆ.
ಅಸ್ತ್ತಿತ್ವದಲ್ಲಿರುವ ಆದಾಯ ಮಾನದಂಡವನ್ನು ಪುನರ್ಪರಿಶೀಲಿಸಲಾಗುವುದು ಮತ್ತು ನಾಲ್ಕು ವಾರಗಳಲ್ಲಿ ನಿರ್ಧಾರವೊಂದನ್ನು ತೆಗೆದುಕೊಳ್ಳಲಾಗುವುದು ಎಂದು ಹಿಂದಿನ ವಿಚಾರಣೆ ಸಂದರ್ಭದಲ್ಲಿ ಕೇಂದ್ರದ ಪರ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ನ್ಯಾಯಾಲಯಕ್ಕೆ ತಿಳಿಸಿದ್ದರು.
ಎಂಟು ಲ.ರೂ.ಗಳ ವಾರ್ಷಿಕ ಆದಾಯ ಮಾನದಂಡವು ಸಂವಿಧಾನದ 14,15 ಮತ್ತು 16ನೇ ವಿಧಿಗಳಿಗೆ ಅನುಗುಣವಾಗಿದೆ ಎಂದು ಸರಕಾರವು ಈ ಹಿಂದೆ ವಾದಿಸಿತ್ತು.
ಆದಾಗ್ಯೂ ಈ ವಾದವು ನ್ಯಾ.ಡಿ.ವೈ.ಚಂದ್ರಚೂಡ ನೇತೃತ್ವದ ಪೀಠಕ್ಕೆ ಮನವರಿಕೆಯಾಗಿರಲಿಲ್ಲ. ನೀವು ಕೆಲವು ಜನಸಂಖ್ಯಾ ಅಥವಾ ಸಾಮಾಜಿಕ-ಆರ್ಥಿಕ ದತ್ತಾಂಶಗಳನ್ನು ಹೊಂದಿರಬೇಕು. ಸುಮ್ಮನೆ ಎಂಟು ಲ.ರೂ.ಆದಾಯ ಮಿತಿಯನ್ನು ನಿಗದಿಗೊಳಿಸುವಂತಿಲ್ಲ ಎಂದು ನ್ಯಾ.ಚಂದ್ರಚೂಡ ಹೇಳಿದ್ದರು.







