ಕೋವಿಡ್ ನಿಯಮದ ನೆಪದಲ್ಲಿ ಮೇಕೆದಾಟು ಪಾದಯಾತ್ರೆ ತಡೆಯಲು ಸಾಧ್ಯವಿಲ್ಲ: ಡಿಕೆಶಿ

ಮೈಸೂರು, ಜ.3: ಮೇಕೆದಾಟು ಪಾದಯಾತ್ರೆ ತಡೆಯಲು ಬಿಜೆಪಿಯವರು ಕೋವಿಡ್ ಹೆಚ್ಚಳ ಕಾರಣ ನೀಡಿ ಲಾಕ್ ಡೌನ್ ಮಾಡಲು ಸನ್ನಿವೇಶ ಸೃಷ್ಟಿ ಮಾಡುತ್ತಿದ್ದಾರೆ. ಯಾವುದೇ ಲಾಕ್ ಡೌನ್ ಮಾಡಿದರು ಮೇಕೆದಾಟು ಪಾದಯಾತ್ರೆ ತಡೆಯಲು ಸಾಧ್ಯವಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ರಾಜ್ಯ ಸರಕಾರಕ್ಕೆ ಸವಾಲು ಹಾಕಿದ್ದಾರೆ.
ನಗರದ ಪತ್ರಕರ್ತರ ಭವನದಲ್ಲಿ ಸೋಮವಾರ ಡಿ.ಕೆ.ಶಿವಕುಮಾರ್ ಹಾಗೂ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ನಡೆಸಿದ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಿದ್ದರು.
ನಾವು ರಾಜಕೀಯಕ್ಕಾಗಿ ಈ ಪಾದಯಾತ್ರೆ ಮಾಡುತ್ತಿಲ್ಲ, ರಾಜ್ಯದ ಜನರ ಹಿತಕ್ಕಾಗಿ ಪಾದಯಾತ್ರೆ ಹಮ್ಮಿಕೊಂಡಿದ್ದೇವೆ. ಹಾಗಾಗಿ ಈ ಪಾದಯಾತ್ರೆ ತಡೆಯಲು ಯಾರಿಂದಲೂ ಸಾಧ್ಯವಿಲ್ಲ, ರಾಜ್ಯ ಸರಕಾರ ಬೇಕಂತಲೇ ಕೋವಿಡ್ ಹೆಚ್ಚಳ ನೆಪ ಹೇಳಿ ಲಾಕ್ ಡೌನ್ ಕ್ರಿಯೇಟ್ ಮಾಡಲು ಪ್ರಯತ್ನ ಪಡುತ್ತಿದ್ದಾರೆ. ಅವರು ಯಾವುದೇ ಲಾಕ್ ಡೌನ್ ಮಾಡಿದರೂ ಪಾದಯಾತ್ರೆ ತಡೆಯಲು ಸಾಧ್ಯವಿಲ್ಲ. ನಾವು ಕೋವಿಡ್ ನಿಯಮಗಳನ್ನು ಪಾಲನೆ ಮಾಡಿಯೇ ಪಾದಯಾತ್ರೆ ಮಾಡುತ್ತೇವೆ ಎಂದು ಹೇಳಿದರು.
ಕಾಂಗ್ರೆಸ್ ತನ್ನದೇ ಆದ ಇತಿಹಾಸವನ್ನು ಹೊಂದಿರುವ ಪಕ್ಷ, ಈ ಹಿಂದೆ ಕಾವೇರಿ ನೀರಿಗಾಗಿ ಬಂಗಾರಪ್ಪ, ಎಸ್.ಎಂ.ಕೃಷ್ಣ ನೇತೃತ್ವದಲ್ಲಿ ಹೋರಾಟ ಮಾಡಲಾಗಿದೆ. ರಾಜ್ಯದ ನೆಲ, ಜಲ ಮತ್ತು ಭಾಷೆ ವಿಚಾರ ಬಂದಾಗ ನಾವು ಹೋರಾಟ ಮಾಡಲು ಸಿದ್ದರಿದ್ದೇವೆ. ಸದ್ಯ ರಾಜ್ಯದ ಜಲ ವಿಚಾರ ಮುಂದಿರುವುದರಿಂದ ಮೇಕೆದಾಟು ಯೋಜನೆ ಜಾರಿ ಮಾಡುವಂತೆ ಕೇಂದ್ರ ಮತ್ತು ರಾಜ್ಯ ಸರಕಾರದ ಮೇಲೆ ಒತ್ತಡ ಹೇರಲು ಈ ಹೋರಾಟ ಮಾಡಲಾಗುತ್ತಿದೆ ಎಂದು ತಿಳಿಸಿದರು.





