ಕೋವಿಡ್ ನಿಯಮ: ಕಾಂಗ್ರೆಸ್ ನ ಮೇಕೆದಾಟು ಪಾದಯಾತ್ರೆ ಕುರಿತು ಸಿಎಂ, ಗೃಹ ಸಚಿವರು ಹೇಳಿದ್ದೇನು?

ಬೆಂಗಳೂರು, ಜ.3: ರಾಜ್ಯದಲ್ಲಿ, ಅದೇರೀತಿ ನೆರೆಯ ರಾಜ್ಯಗಳಲ್ಲಿ ಕೋವಿಡ್, ಒಮೈಕ್ರಾನ್ ಬಹಳ ವೇಗವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಮಂಗಳವಾರ(ಜ.4) ತಜ್ಞರ ಜೊತೆ ಸಭೆ ನಡೆಸಿ ಚರ್ಚೆಸಲಾಗುವುದು' ಎಂದು ತಿಳಿಸಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮೇಕೆದಾಟು ಯೋಜನೆಗಾಗಿ ಕಾಂಗ್ರೆಸ್ ನಡೆಸಲಿರುವ ಪಾದಯಾತ್ರೆ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.
ಈ ಕುರಿತು ಇಂದು ಬೆಳಗ್ಗೆ ತಮ್ಮ ಆರ್.ಟಿ.ನಗರದ ನಿವಾಸದಲ್ಲಿ ಮಾಧ್ಯಮದವರ ಜೊತೆ ಮಾತನಾಡಿರುವ ಬೊಮ್ಮಾಯಿ, ಕಾಂಗ್ರೆಸ್ ನ ಮೇಕೆದಾಟು ಪಾದಯಾತ್ರೆ ಬಗ್ಗೆ ಗಮನಿಸಿದ್ದೇವೆ, ಮಂಗಳವಾರ ತಜ್ಞರ ಜೊತೆ ಸಭೆ ಬಳಿಕ ನಾವು ರೂಪಿಸುವ ಸಾರ್ವತ್ರಿಕ ನಿಯಮ ಎಲ್ಲರಿಗೂ ಅನ್ವಯಿಸುತ್ತದೆ. ನಾಳೆಯೇ ಎಲ್ಲದರ ಬಗ್ಗೆ ಸಂಪೂರ್ಣ ಚರ್ಚೆಯಾಗಲಿದೆ ಎಂದು ತಿಳಿಸಿದರು.
ಇನ್ನು ಚಿಕ್ಕಮಗಳೂರಿನಲ್ಲಿ ಸುದ್ದಿಗಾರರ ಜೊತೆ ಮಾತನಾಡಿರುವ ಗೃಹ ಸಚಿವ ಆರಗ ಜ್ಞಾನೇಂದ್ರ, 'ಕೊವಿಡ್ ನಿಯಮಗಳನ್ನು ನಾಯಕರಾದವರು ಉಲ್ಲಂಘಿಸುವುದು ಸರಿಯಲ್ಲ, ಪಾದಯಾತ್ರೆಗೆ ಅನುಮತಿ ಕೊಡುವುದು ಬಿಡುವುದು ಬೇರೆ ವಿಷಯ ಆದ್ರೆ ಕಾಂಗ್ರೆಸ್ ಪಕ್ಷದಿಂದ ನಡೆಯುತ್ತಿರುವ ಪಾದಯಾತ್ರೆಗೆ ಬೇಸರವಿದೆ. ಕೊವಿಡ್ ಸಮಯದಲ್ಲಿ ರಾಜಕಾರಣದ ನಡೆ ಸರಿಯಲ್ಲ. ವಿರೋಧ ಪಕ್ಷವಾಗಿ ಹೋರಾಟ ಮಾಡಲು ಅವಕಾಶವಿದೆ' ಎಂದು ತಿಳಿಸಿದರು.





