ಅಂತರ್ ರಾಷ್ಟ್ರೀಯ ಕ್ರಿಕೆಟ್ ಗೆ ಪಾಕಿಸ್ತಾನದ ಆಲ್‌ರೌಂಡರ್ ಮುಹಮ್ಮದ್ ಹಫೀಝ್ ವಿದಾಯ

ಕರಾಚಿ: ಪಾಕಿಸ್ತಾನದ ಆಲ್‌ರೌಂಡರ್ ಮುಹಮ್ಮದ್ ಹಫೀಝ್ ಸೋಮವಾರದಂದು ಅಂತರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದು, ಇದರೊಂದಿಗೆ 18 ವರ್ಷಗಳ ಸುದೀರ್ಘ ವೃತ್ತಿಜೀವನಕ್ಕೆ ತೆರೆ ಎಳೆದಿದ್ದಾರೆ.
ಹಫೀಝ್ ಕೊನೆಯ ಬಾರಿಗೆ ಟ್ವೆಂಟಿ- 20 ವಿಶ್ವಕಪ್‌ನಲ್ಲಿ ಪಾಕಿಸ್ತಾನದ ಪರವಾಗಿ ಆಡಿದ್ದು, ಕಳೆದ ವರ್ಷ ಯುಎಇಯಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧ ಸೆಮಿಫೈನಲ್‌ನಲ್ಲಿ ಕೊನೆಯ ಪಂದ್ಯವಾಡಿದ್ದರು. ಆ ಪಂದ್ಯವನ್ನು ಪಾಕ್ ಸೋತಿತ್ತು.
ಆದಾಗ್ಯೂ, ಮುಹಮ್ಮದ್ ಹಫೀಝ್ ಪ್ರಪಂಚದಾದ್ಯಂತ ಫ್ರಾಂಚೈಸಿ ಆಧಾರಿತ ಲೀಗ್ ಕ್ರಿಕೆಟ್‌ನಲ್ಲಿ ಆಡುವುದನ್ನು ಮುಂದುವರಿಸುತ್ತಾರೆ. 41ರ ಹರೆಯದ ಅವರು ಪಾಕಿಸ್ತಾನದಲ್ಲಿ ಸೋಮವಾರ ಬೆಳಗ್ಗೆ ಪತ್ರಿಕಾಗೋಷ್ಠಿಯಲ್ಲಿ ನಿವೃತ್ತಿ ನಿರ್ಧಾರವನ್ನು ಪ್ರಕಟಿಸಿದರು. ಜನವರಿ 27 ರಿಂದ ಆರಂಭವಾಗುವ ಪಾಕಿಸ್ತಾನ ಸೂಪರ್ ಲೀಗ್‌ನ ಮುಂಬರುವ ಆವೃತ್ತಿಯಲ್ಲಿ ಹಫೀಝ್ ಲಾಹೋರ್ ಖಲಂದರ್ಸ್‌ಗೆ ಸಹಿ ಹಾಕಿದ್ದರು.
2003ರಲ್ಲಿ ಅಂತರ್ ರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ ಹಫೀಝ್ 218 ಏಕದಿನ ಪಂದ್ಯಗಳನ್ನು ಆಡಿದ್ದು, 11 ಶತಕ ಮತ್ತು 38 ಅರ್ಧಶತಕ ಸೇರಿದಂತೆ ಒಟ್ಟು 6,614 ರನ್ ಗಳಿಸಿದ್ದಾರೆ. 50 ಓವರ್‌ಗಳ ಮಾದರಿಯಲ್ಲಿ ಅವರು 139 ವಿಕೆಟ್‌ಗಳನ್ನು ಪಡೆದಿದ್ದರು. ಅವರು 119 ಟ್ವೆಂಟಿ-20 ಪಂದ್ಯಗಳಲ್ಲಿ 2,514 ರನ್ ಬಾರಿಸಿದ್ದಾರೆ ಹಾಗೂ 61 ವಿಕೆಟ್ ಗಳಳನ್ನು ಪಡೆದಿದ್ದಾರೆ.
ಹಫೀಝ್ 2018 ರಲ್ಲಿ ಟೆಸ್ಟ್‌ನಿಂದ ನಿವೃತ್ತಿ ಘೋಷಿಸಿದ್ದರು. ಅವರು 55 ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ. 10 ಶತಕಗಳು ಸೇರಿದಂತೆ ಒಟ್ಟು 3,652 ರನ್ ಗಳಿಸಿದ್ದಾರೆ.
Pakistan all-rounder Mohammad Hafeez has announced his retirement from international cricket. pic.twitter.com/rpTpT3jp6f
— ICC (@ICC) January 3, 2022