ಧೋನಿಯಂತೆ ಇತರ ಆಟಗಾರರೂ ಬಿಸಿಸಿಐ ಬೆಂಬಲ ಪಡೆದಿದ್ದರೆ ಇನ್ನಷ್ಟು ವರ್ಷ ಆಡುತ್ತಿದ್ದರು:ಹರ್ಭಜನ್ ಸಿಂಗ್
ಹೊಸದಿಲ್ಲಿ: "ಧೋನಿ ಇತರ ಆಟಗಾರರಿಗಿಂತ ಉತ್ತಮ ಬೆಂಬಲವನ್ನು ಹೊಂದಿದ್ದರು ಹಾಗೂ ಟೀಮ್ ಮ್ಯಾನೇಜ್ ಮೆಂಟ್ ಧೋನಿಗೆ ನೀಡಿದ ರೀತಿಯಲ್ಲೇ ಇತರರಿಗೆ ಬೆಂಬಲವನ್ನು ನೀಡಿದ್ದರೆ, ನಾನು ಹಾಗೂ ಇತರ ಮಾಜಿ ಆಟಗಾರರು ಇನ್ನಷ್ಟು ವರ್ಷಗಳ ಕಾಲ ಆಡಬಹುದಿತ್ತು. ಉಳಿದ ಆಟಗಾರರು ಏಕಾಏಕಿ ಬ್ಯಾಟ್ ಬೀಸುವುದನ್ನು ಮರೆತಿದ್ದಾರೆ ಹಾಗೂ ಏಕಾಏಕಿ ಹೇಗೆ ಬೌಲಿಂಗ್ ಮಾಡಬೇಕೆಂದು ಅವರಿಗೆ ಗೊತ್ತಾಗಲಿಲ್ಲ ಎಂಬ ಅರ್ಥವಲ್ಲ ”ಎಂದು ಅವರು ಝೀ ನ್ಯೂಸ್‌ಗೆ ನೀಡಿದ ಸಂದರ್ಶನದಲ್ಲಿ ಮಾಜಿ ಸ್ಪಿನ್ನರ್ ಹರ್ಭಜನ್ ಸಿಂಗ್ ಹೇಳಿದರು.
ಮ್ಯಾನೇಜ್‌ಮೆಂಟ್ ನನಗೆ ಹಿಂಬಾಗಿಲನ್ನು ತೋರಿಸದಿದ್ದರೆ ನಾನು ಇನ್ನೂ ನಾಲ್ಕರಿಂದ ಐದು ವರ್ಷಗಳ ಕಾಲ ಆಡುತ್ತಿದ್ದೆ ಹಾಗೂ ಇನ್ನೂ 100-150 ವಿಕೆಟ್‌ಗಳನ್ನು ತೆಗೆದುಕೊಳ್ಳಬಹುದಿತ್ತು ಎಂದು ಹೇಳಿದರು.
"ನಾನು 400 ವಿಕೆಟ್‌ಗಳನ್ನು ಪಡೆದಾಗ ನನಗೆ 31 ವರ್ಷ ಹಾಗೂ ನಾನು ಇನ್ನೂ 4-5 ವರ್ಷಗಳ ಕಾಲ ಆಡುತ್ತಿದ್ದರೆ ನನಗಾಗಿ ನಾನು ನಿಗದಿಪಡಿಸಿದ ಮಾನದಂಡಗಳನ್ನು ಗಮನದಲ್ಲಿಟ್ಟುಕೊಂಡು ಇನ್ನೂ 100-150 ಅಥವಾ ಅದಕ್ಕಿಂತ ಹೆಚ್ಚಿನ ವಿಕೆಟ್‌ಗಳನ್ನು ತೆಗೆದುಕೊಳ್ಳುತ್ತಿದ್ದೆ ಎಂದು ನಾನು ನಿಮಗೆ ಹೇಳಬಲ್ಲೆ’’ ಎಂದರು.
ಅದೇನೇ ಇದ್ದರೂ ಹರ್ಭಜನ್ ಟೆಸ್ಟ್ ಕ್ರಿಕೆಟ್ ನಲ್ಲಿ ಭಾರತದ ನಾಲ್ಕನೇ ಅತಿ ಹೆಚ್ಚು ವಿಕೆಟ್ ಟೇಕರ್ ಆಗಿ ಕ್ರೀಡೆಗೆ ವಿದಾಯ ಹೇಳಿದರು. ಭಾರತ ಪರ ಅನಿಲ್ ಕುಂಬ್ಳೆ, ಕಪಿಲ್ ದೇವ್ ಹಾಗೂ ರವಿಚಂದ್ರನ್ ಅಶ್ವಿನ್ ಮಾತ್ರ ಹರ್ಭಜನ್ ಗಿಂತ ಹೆಚ್ಚು ಟೆಸ್ಟ್ ವಿಕೆಟ್ ಪಡೆದಿದ್ದಾರೆ. ಕಳೆದ ವರ್ಷ ಕ್ರಿಕೆಟ್ ಗೆ ವಿದಾಯ ಹೇಳಿದ್ದ ಹರ್ಭಜನ್ 103 ಟೆಸ್ಟ್ ಪಂದ್ಯಗಳಲ್ಲಿ ಒಟ್ಟು 417 ವಿಕೆಟ್ ಗಳನ್ನು ಪಡೆದಿದ್ದರು.