ಮದುವೆ ವಯಸ್ಸು ಕುರಿತ ಮಸೂದೆ: ಸಂಸದೀಯ ಸಮಿತಿಯಲ್ಲಿ ಏಕೈಕ ಮಹಿಳೆ
ಸಂಸದೆ ಚತುರ್ವೇದಿ ಅಸಮಾಧಾನ

ಹೊಸದಿಲ್ಲಿ,ಜ.3: ಶಿಕ್ಷಣ,ಮಹಿಳೆ,ಮಕ್ಕಳು,ಯುವಜನರು ಮತ್ತು ಕ್ರೀಡೆಗಳ ಕುರಿತ 31 ಸದಸ್ಯರ ಸಂಸದೀಯ ಸ್ಥಾಯಿ ಸಮಿತಿಯಲ್ಲಿ ಏಕೈಕ ಮಹಿಳಾ ಸದಸ್ಯೆಯಿರುವ ಬಗ್ಗೆ ಕಳವಳವನ್ನು ವ್ಯಕ್ತಪಡಿಸಿ ಶಿವಸೇನೆ ನಾಯಕಿ ಹಾಗೂ ಮಹಾರಾಷ್ಟ್ರದ ಸಂಸದೆ ಪ್ರಿಯಾಂಕಾ ಚತುರ್ವೇದಿಯವರು ರಾಜ್ಯಸಭೆಯ ಸಭಾಪತಿ ಎಂ.ವೆಂಕಯ್ಯ ನಾಯ್ಡು ಅವರಿಗೆ ಸೋಮವಾರ ಪತ್ರವನ್ನು ಬರೆದಿದ್ದಾರೆ.
ಬಿಜೆಪಿಯ ರಾಜ್ಯಸಭಾ ಸದಸ್ಯ ವಿನಯ ಸಹಸ್ರಬುದ್ಧೆ ನೇತೃತ್ವದ ಸಂಸದೀಯ ಸಮಿತಿಯ ಅವಗಾಹನೆಗೆ ಬಾಲ್ಯವಿವಾಹ ನಿಷೇಧ (ತಿದ್ದುಪಡಿ) ಮಸೂದೆಯನ್ನು ಸಲ್ಲಿಸಲಾಗಿದ್ದು,ಅದು ಶೀಘ್ರವೇ ಚರ್ಚೆಗಳನ್ನು ಆರಂಭಿಸಲಿದೆ. ಟಿಎಂಸಿಯ ರಾಜ್ಯಸಭಾ ಸದಸ್ಯೆ ಸುಷ್ಮಿತಾ ದೇವ್ ಅವರು ಸಮಿತಿಯಲ್ಲಿರುವ ಏಕೈಕ ಮಹಿಳೆಯಾಗಿದ್ದಾರೆ.
ಮಸೂದೆಯು ಮಹಿಳೆಯರ ವಿವಾಹದ ಕಾನೂನುಬದ್ಧ ವಯಸ್ಸನ್ನು 18 ವರ್ಷಗಳಿಂದ 21 ವರ್ಷಗಳಿಗೆ ಹೆಚ್ಚಿಸಲು ಉದ್ದೇಶಿಸಿದೆ.
‘ಮಹಿಳೆಯರು ಮತ್ತು ಭಾರತೀಯ ಸಮಾಜಕ್ಕೆ ಪ್ರಮುಖವಾಗಿ ಸಂಬಂಧಿಸಿರುವ ಮಸೂದೆಯನ್ನು ಸೂಕ್ತ ಮಹಿಳಾ ಪ್ರಾತಿನಿಧ್ಯವಿಲ್ಲದ ಸಮಿತಿಯು ಚರ್ಚಿಸಲಿದೆ ಎನ್ನುವುದು ನಿರಾಶಾದಾಯಕವಾಗಿದೆ. ಆದ್ದರಿಂದ ಭಾರತದಲ್ಲಿ ಮಹಿಳೆಯರು ಎದುರಿಸುತ್ತಿರುವ ಸಮಸ್ಯೆಗಳಿಗೆ ಸಂಬಂಧಿಸಿದ ಮಸೂದೆಯ ಕುರಿತು ಚರ್ಚೆಗಳಲ್ಲಿ ಹೆಚ್ಚಿನ ಮಹಿಳಾ ಪ್ರಾತಿನಿಧ್ಯವನ್ನು ಖಚಿತಪಡಿಸುವಂತೆ ನಾನು ನಿಮ್ಮನ್ನು ಕೋರುತ್ತಿದ್ದೇನೆ ’ಎಂದು ಚತುರ್ವೇದಿ ಪತ್ರದಲ್ಲಿ ಬರೆದಿದ್ದಾರೆ.
ಈ ನಡುವೆ ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಸುಷ್ಮಿತಾ ದೇವ್,ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯಕ್ಕೆ ಸಂಬಂಧಿಸಿದ ಸಮಿತಿಯಲ್ಲಿ ತಾನೊಬ್ಬಳೇ ಮಹಿಳೆಯಾಗಿರುವುದು ತನಗೆ ಅಚ್ಚರಿಯನ್ನು ಮೂಡಿಸಿದೆ. ನಿಸ್ಸಂಶಯವಾಗಿ ಇದು ಲಿಂಗ ಅಸಮಾನತೆಯಾಗಿದೆ. ಮಸೂದೆಗೆ ಸಂಬಂಧಿಸಿದಂತೆ ಎಲ್ಲ ಮಹಿಳಾ ಸಂಸದರು ತಮ್ಮ ಅಭಿಪ್ರಾಯಗಳು ಮತ್ತು ಸಲಹೆಗಳನ್ನು ಸಮಿತಿಯ ಅಧ್ಯಕ್ಷರಿಗೆ ಸಲ್ಲಿಸಲು ಅವಕಾಶ ನೀಡಬೇಕೆಂದು ತಾನು ಸಭಾಪತಿಗಳನ್ನು ಕೋರುತ್ತೇನೆ ಎಂದು ಹೇಳಿದರು.







