ನಾಳೆ ‘ಮಹಿಳಾ ಸ್ವಾಸ್ಥ್ಯಕ್ಕೆ ಮೊಬೈಲ್ ಕ್ಲಿನಿಕ್’ ಸಂಚಾರಿ ವಾಹನಕ್ಕೆ ಚಾಲನೆ
ಮಂಗಳೂರು, ಜ.3: ರೋಟರಿ ಕ್ಲಬ್ ಮಂಗಳೂರು ವತಿಯಿಂದ ‘ಮಹಿಳಾ ಸ್ವಾಸ್ಥ್ಯಕ್ಕೆ ಮೊಬೈಲ್ ಕ್ಲಿನಿಕ್’-ಕ್ಯಾನ್ಸರ್ ಪತ್ತೆ ಮಾಡುವ ಮೊಬೈಲ್ ಬಸ್ ವಾಹನ ಸೇವೆ ಆರಂಭಿಸಲಾಗಿದ್ದು, ಜ.5ರಂದು ಸಂಜೆ 4:30ಕ್ಕೆ ನಗರದ ಪುರಭವನದಲ್ಲಿ ಚಾಲನೆ ದೊರೆಯಲಿದೆ ಎಂದು ರೋಟರಿ ಕ್ಲಬ್ ಮಂಗಳೂರು ಅಧ್ಯಕ್ಷ ಸುಧೀರ್ ಕುಮಾರ್ ಜಲನ್ ತಿಳಿಸಿದರು.
ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸುಮಾರು 1.25 ಕೋ.ರೂ. ವೆಚ್ಚದಲ್ಲಿ ಮೊಬೈಲ್ ವಾಹನ ಸಿದ್ಧಪಡಿಸಲಾಗಿದೆ. ಮಂಗಳೂರಿನ ಯೆನೆಪೊಯ ಆಸ್ಪತ್ರೆಯ ನೇತೃತ್ವದಲ್ಲಿ ಮೊಬೈಲ್ ವಾಹನ ಸಂಚಾರ ನಡೆಸಲಿದೆ. ಇದರಲ್ಲಿ ತಜ್ಞ ವೈದ್ಯರ ತಂಡ ಇರಲಿದ್ದು, ಅಗತ್ಯ ಸಲಹೆ ಸೂಚನೆಗಳನ್ನು ನೀಡಲಿದ್ದಾರೆ. ವಾರದಲ್ಲಿ ಮೂರು ದಿನ ಈ ವಾಹನ ಸಂಚಾರ ನಡೆಸಲಿದೆ ಎಂದರು.
ಮಹಿಳೆಯರಲ್ಲಿ ಬರುವ ಕ್ಯಾನ್ಸರ್‌ನಂತಹ ಸಮಸ್ಯೆಗಳನ್ನು ಬಹುತೇಕ ಮಂದಿ ನಿರ್ಲಕ್ಷ್ಯಿಸುವುದಿದೆ. ಸ್ತನ ಕ್ಯಾನ್ಸರ್‌ನಂತಹ ಸಮಸ್ಯೆ ಕಂಡುಬಂದರೆ ಕೆಲವರು ಹೇಳಿಕೊಳ್ಳಲಾಗದೆ ಮತ್ತು ಆಸ್ಪತ್ರೆಗೆ ತೆರಳದೆ ಮನೆಯಲ್ಲಿಯೇ ಉಳಿದು ಬಿಡುತ್ತಾರೆ. ಅಂತವರಿಗೆ ಈ ಮೊಬೈಲ್ ಕ್ಲಿನಿಕ್ ಉತ್ತಮ ವ್ಯವಸ್ಥೆಯಾಗಿದೆ. ಬಾಯಿ ಕ್ಯಾನ್ಸರ್, ಸ್ತನ ಕ್ಯಾನ್ಸರ್ ಮತ್ತು ಸೆರ್ವಿಕಲ್ ಕ್ಯಾನ್ಸರ್‌ಗಳನ್ನು ಆರಂಭದಲ್ಲಿಯೇ ಪತ್ತೆಹಚ್ಚಬೇಕು. ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು, ಮಹಿಳಾ ಸ್ವಸಹಾಯ ಸಂಘಗಳು ಮತ್ತು ಸ್ಥಳೀಯ ಸಮಾಜ ಮುಖಂಡರೊಂದಿಗೆ ಆರೋಗ್ಯ ಶಿಬಿರಗಳನ್ನು ಆಯೋಜಿಸಿ ಮೊಬೈಲ್ ಸ್ವಾಸ್ಥ್ಯ ಕ್ಲಿನಿಕ್ ವಾಹನದಲ್ಲಿ ಪರೀಕ್ಷಿಸಬಹುದಾಗಿದೆ. ಈ ಎಲ್ಲಾ ಸೇವೆಗಳನ್ನು ಉಚಿತವಾಗಿ ಮಾಡಲಾಗುವುದು. ಮೊಬೈಲ್ ವಾಹನದ ಹೆಚ್ಚಿನ ಮಾಹಿತಿಗೆ ಮಂಗಳೂರಿನ ಯೆನೆಪೊಯ ಆಸ್ಪತ್ರೆಯನ್ನು ಸಂಪರ್ಕಿಸಬಹುದು ಎಂದು ಸುಧೀರ್ ಕುಮಾರ್ ಜಲನ್ ವಿವರಿಸಿದರು.
ಸುದ್ದಿಗೋಷ್ಠಿಯಲ್ಲಿ ಗ್ಲೋಬಲ್ ಗ್ರ್ಯಾಂಟ್ ಪ್ರಾಜೆಕ್ಟ್ ಮುಖ್ಯಸ್ಥ ಜತಿನ್ ವಿ.ಅತ್ತಾವರ್, ಯೆನೆಪೊಯ ಆಸ್ಪತ್ರೆಯ ತಜ್ಞ ವೈದ್ಯ ಡಾ.ವಿಜಯಕುಮಾರ್, ಡಾ.ಅಭಯ್, ರೋಟರಿ ಕ್ಲಬ್ ಮಂಗಳೂರು ಮಾಜಿ ಅಧ್ಯಕ್ಷ ಮಾಧವ ಸುವರ್ಣ ಉಪಸ್ಥಿತರಿದ್ದರು.







