ಅಲ್ಪಸಂಖ್ಯಾತರ ಶಿಕ್ಷಣ, ಉದ್ಯೋಗ, ವಸತಿ ವಿಶೇಷ ಯೋಜನೆ ತ್ವರಿತ ಜಾರಿಗೆ ಸೂಚನೆ: ಮುಖ್ತಾರ್ ಹುಸೇನ್ ಪಠಾಣ್
ಮಂಗಳೂರು, ಜ.3: ಅಲ್ಪಸಂಖ್ಯಾತರ ಶಿಕ್ಷಣ, ಉದ್ಯೋಗ, ವಸತಿ ನಿರ್ಮಾಣ ವಿಶೇಷ ಯೋಜನೆಗಳ ತ್ವರಿತ ಜಾರಿಗೆ ಸೂಕ್ತ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚನೆ ನೀಡಿರುವುದಾಗಿ ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ಅಧ್ಯಕ್ಷ ಮುಖ್ತಾರ್ ಹುಸೇನ್ ಎಫ್. ಪಠಾಣ್ ತಿಳಿಸಿದ್ದಾರೆ.
ಅವರು ನಗರದ ಕದ್ರಿಯಲ್ಲಿರುವ ಸರ್ಕ್ಯೂಟ್ ಹೌಸ್‌ನಲ್ಲಿಂದು ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಲು ಆಗಮಿಸಿದ ಸಂದರ್ಭದಲ್ಲಿ ಸುದ್ದಿಗಾರರನ್ನುದ್ದೇಶಿಸಿ ಮಾತನಾಡುತ್ತಿದ್ದರು.
ಅಲ್ಪಸಂಖ್ಯಾತ ವಿದ್ಯಾರ್ಥಿಗಳು ದೇಶದಲ್ಲಿ ಅಥವಾ ವಿದೇಶದಲ್ಲಿ ವ್ಯಾಸಂಗ ಮಾಡುತ್ತಿದ್ದರೂ ವಿಶೇಷವಾಗಿ ಶೇ.2ರ ಬಡ್ಡಿ ದರದಲ್ಲಿ ಗರಿಷ್ಠ 20 ಲಕ್ಷ ರೂ.ವರೆಗೆ ಸಾಲ ನೀಡಲಾಗುವುದು. ಅಲ್ಪಸಂಖ್ಯಾತರ ಮನೆ ನಿರ್ಮಾಣಕ್ಕೆ ತಲಾ 5 ಲಕ್ಷ ರೂ. ಸಾಲ ನೀಡುವ ಯೋಜನೆ ಇದೆ. ಸ್ವಉದ್ಯೋಗ ಮಾಡಲು ತಲಾ 10 ಲಕ್ಷ ರೂ.ವರೆಗೆ ಸಾಲ ನೀಡುವ ಯೋಜನೆ ಇದೆ. ಶ್ರಮ ಶಕ್ತಿ ಯೋಜನೆಯ ಮೂಲಕವೂ ಸಬ್ಸಿಡಿ ಸಹಿತ ಸಾಲ ನೀಡಲಾಗುತ್ತಿದೆ. ಸರಕಾರದ ಎಲ್ಲ ಯೋಜನೆಗಳನ್ನು ಜನರಿಗೆ ತಲುಪಿಸಲು ಸಹಾಯವಾಣಿ 8277799990 ಅನ್ನು ಆರಂಭಿಸಲಾಗಿದೆ. ದ.ಕ. ಜಿಲ್ಲೆಯ ವಿವಿಧ ಕಡೆ ಪ್ರವಾಸ ಮಾಡಿದ ಸಂದರ್ಭದಲ್ಲಿ ದರ್ಗಾ, ಮಸೀದಿ, ಚರ್ಚ್, ಜೈನ ಬಸದಿಗಳು, ಅಲ್ಪಸಂಖ್ಯಾತರ ವಿದ್ಯಾರ್ಥಿ ನಿಲಯಗಳಿಗೆ ಭೇಟಿ ಮಾಡಲಾಗಿದೆ. ಈ ಸಂದರ್ಭದಲ್ಲಿ ಗಮನಕ್ಕೆ ಬಂದ ಸಮಸ್ಯೆಗಳ ಪರಿಹಾರ ತ್ವರಿತವಾಗಿ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಪಠಾಣ್ ತಿಳಿಸಿದ್ದಾರೆ.
ವಿವಿಧ ಯೋಜನೆಗಳಲ್ಲಿ ಸಾಲ ಪಡೆದವರು ಮರು ಪಾವತಿಯ ಬಗ್ಗೆಯೂ ಮುತುವರ್ಜಿ ತೋರಿದರೆ ಇನ್ನೂ ಹೆಚ್ಚಿನ ಫಲಾನುಭವಿಗಳಿಗೆ ಯೋಜನೆಯ ಸೌಲಭ್ಯವನ್ನು ವಿಸ್ತರಿಸಲು ಸಾಧ್ಯವಾಗುತ್ತದೆ ಎಂದು ಮುಕ್ತಾರ್ ಹುಸೈನ್ ಪಠಾಣ್ ತಿಳಿಸಿದ್ದಾರೆ.
ಇದೇ ಸಂದರ್ಭದಲ್ಲಿ ಕೋವಿಡ್ ಸಂದರ್ಭದಲ್ಲಿ ವಿಶೇಷ ಕಾರ್ಯನಿರ್ವಹಿಸಿದ ರಮೇಶ್ ಶೆಟ್ಟಿಯವರನ್ನು ಮುಖ್ತಾರ್ ಹುಸೈನ್ ಪಠಾಣ್ ಅಭಿನಂದಿಸಿದರು.





