'ಲಂಚ ಮುಕ್ತ ಊರು ಆಂದೋಲನ'ಕ್ಕೆ ಸಹಕರಿಸಲು ಡಾ.ಶಿವಾನಂದ ಮನವಿ
ಮಂಗಳೂರು, ಜ.3: ಲಂಚ ಮುಕ್ತ ಊರು, ತಾಲೂಕು ಆಶಯದಲ್ಲಿ ಬೃಹತ್ ಆಂದೋಲನ ಕೈಗೆತ್ತಿಕೊಳ್ಳಲಾಗಿದ್ದು, ಜನತೆ ಇದಕ್ಕೆ ಕೈಜೋಡಿಸುವ ಮುಲಕ ಲಂಚ, ಭ್ರಷ್ಟಾಚಾರ ಮುಕ್ತ ಸಮಾಜ ನಿರ್ಮಾಣಕ್ಕೆ ಸಹಕರಿಸಬೇಕು ಎಂದು ಡಾ.ಯು.ಪಿ.ಶಿವಾನಂದ ಮನವಿ ಮಾಡಿದ್ದಾರೆ.
ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಮ್ಮ ಊರು ಮತ್ತು ತಾಲೂಕಿನ ಸರಕಾರಿ ಇಲಾಖೆಗಳಲ್ಲಿ ಲಂಚ ನಿರ್ಮೂಲನೆಯಾಗಬೇಕಾದರೆ ಜನರು ಲಂಚ ತೆಗೆದುಕೊಳ್ಳುವಂತಹ ವ್ಯಕ್ತಿಗಳನ್ನು ಗುರುತಿಸಬೇಕು ಮತ್ತು ಇದನ್ನು ಖಂಡಿಸಬೇಕು. ಹಾಗೆಯೇ ಅವರ ಬಗ್ಗೆ ಪ್ರಚಾರ ಮಾಡಬೇಕು. ಅಂತಹವರನ್ನು ಗೌರವಿಸುವುದನ್ನು, ಸನ್ಮಾನಿಸುವುದನ್ನು ನಿಲ್ಲಿಸಬೇಕು ಎಂದರು.
ಲಂಚ, ಭ್ರಷ್ಟಾಚಾರ ಮುಕ್ತ ಅಭಿಯಾನದ ಭಾಗವಾಗಿ ಸುಳ್ಯ, ಪುತ್ತೂರು, ಬೆಳ್ತಂಗಡಿಗಳಲ್ಲಿ ಭ್ರಷ್ಟಾಚಾರ ಆಂದೋಲನ ಹಾಗೂ ಉತ್ತಮ ಸೇವೆಗೆ ಪುರಸ್ಕಾರವನ್ನು ಹಮ್ಮಿಕೊಳ್ಳಲಾಗಿದೆ. ಭ್ರಷ್ಟಾಚಾರದ ಪ್ರತಿಕೃತಿ ತಾಲೂಕಿನಾದ್ಯಂತ ಸಂಚರಿಸಿ ಜ.10ರಂದು ದಹನಗೊಳಿಸಲಾಗುವುದು. ಉತ್ತಮ ಸೇವೆ ನೀಡಿದವರನ್ನು ಪುರಸ್ಕರಿಸಲಾಗುವುದು. ಭ್ರಷ್ಟಾಚಾರ, ಲಂಚದ ವಿರುದ್ದ ಜಾಗೃತಿಯನ್ನು ಜ.6ರಂದು ಮಾಜಿ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆಯವರು ಸಂವಾದದ ಮೂಲಕ ನಡೆಸಿಕೊಡಲಿದ್ದಾರೆ ಹಾಗೂ ಭ್ರಷ್ಟಚಾರದ ವಿರುದ್ಧ ಫಲಕವನ್ನು ಬಿಡುಗಡೆಗೊಳಿಸಲಿದ್ದಾರೆ ಎಂದರು.
ಈ ಆಂದೋಲನ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ನಡೆಯಬೇಕು. ಭ್ರಷ್ಟಾಚಾರಿಗಳನ್ನು ಸಮಾಜ ಬಹಿಷ್ಕರಿಸಬೇಕು ಹಾಗೂ ಜಿಲ್ಲೆ ಭ್ರಷ್ಟಾಚಾರ, ಲಂಚಮುಕ್ತ ಜಿಲ್ಲೆಯಾಗಬೇಕು ಎಂಬುದು ಇದರ ಆಶಯವಾಗಿದೆ ಎಂದವರು ವಿವರಿಸಿದರು.
ಸುದ್ದಿಗೋಷ್ಠಿಯಲ್ಲಿ ಸೃಜನ್ ಉರುಂಬೈಲ್, ಸಂತೋಷ್ ಕುಮಾರ್ ಉಪಸ್ಥಿತರಿದ್ದರು.







