'ಬುಲ್ಲಿ ಬಾಯಿ' ಆ್ಯಪ್ ವಿವಾದ : ಟ್ವಿಟರ್, ಗಿಟ್ಹಬ್ನಿಂದ ಮಾಹಿತಿ ಕೋರಿದ ದಿಲ್ಲಿ ಪೊಲೀಸರು

Photo: Twitter
ಹೊಸದಿಲ್ಲಿ: ವಿವಾದಿತ 'ಬುಲ್ಲಿ ಬಾಯಿ' ಮೊಬೈಲ್ ಆ್ಯಪ್ನ ಡೆವಲೆಪರ್ ಕುರಿತು ಮಾಹಿತಿಯನ್ನು ದಿಲ್ಲಿ ಪೊಲೀಸರು ಗಿಟ್ಹಬ್ ಪ್ಲಾಟ್ಫಾರ್ಮ್ನಿಂದ ಕೋರಿದ್ದಾರೆ. ದಿಲ್ಲಿ ಪೊಲೀಸರು ಟ್ವಿಟರ್ ಗೂ ಪತ್ರ ಬರೆದು ಈ ನಿರ್ದಿಷ್ಟ ಮೊಬೈಲ್ ಆ್ಯಪ್ಗೆ ಸಂಬಂಧಿಸಿದ ಖಾತೆಯನ್ನು ನಿರ್ವಹಿಸುವವರ ಕುರಿತು ಮಾಹಿತಿ ಕೇಳಿದ್ದಾರೆ ಎಂದು ವರದಿಯಾಗಿದೆ.
ಈ 'ಬುಲ್ಲಿ ಬಾಯಿ ಆ್ಯಪ್' ಶೇರ್ ಮಾಡುವ ಯಾವುದೇ ನಿಂದನಾತ್ಮಕ ವಿಷಯವನ್ನು ಟ್ವಿಟರ್ ಬ್ಲಾಕ್ ಮಾಡಬೇಕು ಅಥವಾ ತೆಗೆದುಹಾಕಬೇಕೆಂದೂ ಪೊಲೀಸರು ಆಗ್ರಹಿಸಿದ್ದಾರೆ. "ನೂರಾರು ಮುಸ್ಲಿಂ ಮಹಿಳೆಯರ ಮತ್ತು ಇತರ ಖ್ಯಾತನಾಮರ ಚಿತ್ರಗಳನ್ನು 'ಹರಾಜಿಗೆ' ಈ ಆ್ಯಪ್ ಹಾಕಿದೆ,'' ಎಂದು ಪೊಲೀಸರು ಹೇಳಿದ್ದಾರೆ.
ಈ ಆ್ಯಪ್ ಹಿಂದೆ ಇರುವವರ ವಿರುದ್ಧ ಕ್ರಮಕೈಗೊಳ್ಳಬೇಕೆಂಬ ವ್ಯಾಪಕ ಆಗ್ರಹದ ಹಿನ್ನೆಲೆಯಲ್ಲಿ ರವಿವಾರ ಪ್ರತಿಕ್ರಿಯಿಸಿದ್ದ ಐಟಿ ಸಚಿವ ಅಶ್ವಿನಿ ವೈಷ್ಣವ್, ಸರಕಾರ ಈ ನಿಟ್ಟಿನಲ್ಲಿ ದಿಲ್ಲಿ ಪೊಲೀಸರ ಜತೆ ಸಂಪರ್ಕದಲ್ಲಿದೆ ಎಂದು ತಿಳಿಸಿದ್ದರು. ಈ ಆ್ಯಪ್ ಅನ್ನು ಅಪ್ಲೋಡ್ ಮಾಡಿದ ಬಳಕೆದಾರರನ್ನು ಗಿಟ್ಹಬ್ ನಿರ್ಬಂಧಿಸಿದೆ ಎಂದೂ ಅವರು ತಿಳಿಸಿದ್ದರು. ರಾಷ್ಟ್ರೀಯ ಮಹಿಳಾ ಆಯೋಗವೂ ಸೂಕ್ತ ಕ್ರಮಕ್ಕಾಗಿ ಸರಕಾರವನ್ನು ಆಗ್ರಹಿಸಿತ್ತು.
ಪತ್ರಕರ್ತೆಯೊಬ್ಬರ ತಿರುಚಿದ ಚಿತ್ರವನ್ನು ಅನಾಮಿಕ ವ್ಯಕ್ತಿಗಳು ವೆಬ್ಸೈಟ್ ಒಂದರಲ್ಲಿ ಅಪ್ಲೋಡ್ ಮಾಡಿದ ಹಿನ್ನೆಲೆಯಲ್ಲಿ ಪತ್ರಕರ್ತೆ ದೂರು ದಾಖಲಿಸಿದ ನಂತರ ಪೊಲೀಸರು ಶನಿವಾರ ರಾತ್ರಿ ಎಫ್ಐಆರ್ ದಾಖಲಿಸಿದ್ದರು.







