ಮಹಾನಗರಗಳ 75% ಪ್ರಕರಣಗಳು ಒಮೈಕ್ರಾನ್, ನಾವು ಮೂರನೇ ಅಲೆಯಲ್ಲಿದ್ದೇವೆ: ಕೋವಿಡ್ ಟಾಸ್ಕ್‌ಫೋರ್ಸ್ ಮುಖ್ಯಸ್ಥ

ಹೊಸದಿಲ್ಲಿ: ಭಾರತದ ಮಹಾ ನಗರಗಳಲ್ಲಿ ವರದಿಯಾಗುತ್ತಿರುವ ಕೋವಿಡ್ ಪ್ರಕರಣಗಳಲ್ಲಿ ಬಹುಪಾಲು ಪ್ರಕರಣಗಳು ಒಮೈಕ್ರಾನ್ ರೂಪಾಂತರಿಯೆಂದು ಕೋವಿಡ್ ವ್ಯಾಕ್ಸಿನ್ ಟಾಸ್ಕ್ ಫೋರ್ಸ್ ಮುಖ್ಯಸ್ಥ ಡಾ. ಎನ್‌ಕೆ ಅರೋರಾ ಎನ್‌ಡಿಟಿವಿಗೆ ತಿಳಿಸಿದ್ದಾರೆ.
ಮಹಾನಗರಗಳಾದ ಮುಂಬೈ, ದಿಲ್ಲಿ, ಕೊಲ್ಕತ್ತಾ ಮೊದಲಾದ ನಗರದಲ್ಲಿ ಈಗ ಸಕ್ರಿಯವಾಗಿರುವ ಪ್ರಕರಣಗಳಲ್ಲಿ 75% ಪ್ರಕರಣಗಳು ವೇಗವಾಗಿ ಹರಡಬಲ್ಲ ಒಮೈಕ್ರಾನ್ ರೂಪಾಂತರಿ ಎಂದು ಅವರು ತಿಳಿಸಿದ್ದಾರೆ. ಭಾರತದಲ್ಲಿ ಸಂಭಾವ್ಯ ಮೂರನೆ ಕೋವಿಡ್ ಅಲೆಯಲ್ಲಿ ಒಮೈಕ್ರಾನ್ ಬಹುಮುಖ್ಯ ಪಾತ್ರ ವಹಿಸುತ್ತದೆ ಎಂದು ಅವರು ಇದೇ ಸಂಧರ್ಭದಲ್ಲಿ ಹೇಳಿದ್ದಾರೆ.
ನಮ್ಮಲ್ಲಿ ಡಿಸೆಂಬರ್ ಮೊದಲ ವಾರದಲ್ಲಿ ಒಮೈಕ್ರಾನ್ ರೂಪಾಂತರಿಯ ಮೊದಲ ಪ್ರಕರಣ ದಾಖಲಾಯಿತು. ಕಳೆದ ವಾರ ಒಟ್ಟಾರೆ ದೇಶಾದ್ಯಂತ 12% ಪ್ರಕರಣಗಳು ಒಮೈಕ್ರಾನ್ ಎಂದು ಗುರುತಿಸಲಾಗಿದೆ. ಅದೀಗ 28% ಕ್ಕೇರಿದೆ. ಇದೇ ಅಂಕಿ ಅಂಶಗಳ ಪ್ರಕಾರ ಒಮೈಕ್ರಾನ್ ವೇಗವಾಗಿ ಹರಡುತ್ತಿದೆ. ದೆಹಲಿ, ಮುಂಬೈ ಹಾಗೂ ಕೊಲ್ಕತ್ತಾಗಳಂತಹ ಮಹಾನಗರಗಳಲ್ಲಿ ಪತ್ತೆಯಾದ ಪ್ರಕರಣಗಳಲ್ಲಿ ಮುಕ್ಕಾಲಂಶ ಪ್ರಕರಣಗಳು ಒಮೈಕ್ರಾನ್ ರೂಪಾಂತರಿಯದ್ದು ಎಂದು ಅರೋರ ಹೇಳಿದ್ದಾರೆ.
ಇದುವರೆಗೂ ಭಾರತದಲ್ಲಿ 1700 ಒಮೈಕ್ರಾನ್ ಪ್ರಕರಣಗಳು ದಾಖಲಾಗಿದ್ದು, ಮಹಾರಾಷ್ಟ್ರ ಒಂದರಲ್ಲೇ 510 ಪ್ರಕರಣಗಳು ಪತ್ತೆಯಾಗಿದೆ. ದೇಶಾದ್ಯಂತ ಕೋವಿಡ್ ಪ್ರಕರಣಗಳಲ್ಲಿ ಬರೋಬ್ಬರಿ 22% ಹೆಚ್ಚಳಗೊಂಡಿದೆ.
ಭಾರತವು ಕೋವಿಡ್ ಮೂರನೆಯ ಅಲೆಯ ಸಮೀಪದಲ್ಲಿದೆ. ಕೋವಿಡ್ ಪ್ರಕರಣಗಳ ನಾಗಾಲೋಟದಿಂದಲೇ ಅದನ್ನು ಹೇಳಬಹುದು. ಸಾಂಕ್ರಾಮಿಕ ರೋಗದ ಅಲೆಗಳು ನೂತನ ರೂಪಾಂತರಿಯಿಂದ ಉಂಟಾಗುತ್ತದೆ. ಈ ಬಾರಿ ಅದು (ನೂತನ ರೂಪಾಂತರಿ) ಒಮೈಕ್ರಾನ್ ಎಂದು ಅರೋರ ತಿಳಿಸಿದ್ದಾರೆ.
ಇದೇ ವೇಳೆ, 15 ರಿಂದ 18 ವರ್ಷ ವಯಸ್ಸಿನ ಮಕ್ಕಳಿಗೆ ಲಸಿಕೆ ನೀಡುವುದನ್ನು ಸಂಪೂರ್ಣ ಸುರಕ್ಷಿತ ಎಂದು ಅರೋರ ಹೇಳಿದ್ದಾರೆ.







