ತುಂಬೆ ಕಾಲೇಜಿನಲ್ಲಿ ಬಸ್ತಿ ವಾಮನ್ ಶೆಣೈಗೆ ಶ್ರದ್ಧಾಂಜಲಿ ಸಭೆ

ಬಂಟ್ವಾಳ, ಜ. 3: ನಿನ್ನೆ ನಿಧನರಾದ ವಿಶ್ವ ಕೊಂಕಣಿ ಸರ್ದಾರ್ ಬಸ್ತಿ ವಾಮನ್ ಶೆಣೈ ಅವರಿಗೆ ಶ್ರದ್ಧಾಂಜಲಿ ನುಡಿ ನಮನ ಕಾರ್ಯಕ್ರಮ ತುಂಬೆ ಪದವಿ ಪೂರ್ವ ಕಾಲೇಜಿನಲ್ಲಿ ಸೋಮವಾರ ನಡೆಯಿತು.
ಮಾಜಿ ಸಚಿವ ಬಿ.ರಮಾನಾಥ ರೈ ಅವರು ಮಾತನಾಡಿ, ಸದಾ ಸಮಾಜ ಸೇವೆಯೊಂದಿಗೆ ಮಾನವೀಯ ಗುಣಗಳನ್ನು ಮೈಗೂಡಿಸಿ ಸಮಾಜದ ಒಳಿತಿಗಾಗಿ ಬದುಕಿ ಬಾಳಿದ ಬಸ್ತಿ ವಾಮನ ಶೆಣೈ ಅವರು ಸದಾ ಆದರ್ಶಪ್ರಾಯರು ಎಂದರು.
ಅವರು ಕೊಂಕಣಿ ಅಕಾಡಮಿ, ಶ್ರೀನಿವಾಸ್ ಮಲ್ಯ ವೃತ್ತ ಹಾಗೂ ವಿಶ್ವ ಕೊಂಕಣಿ ಕೇಂದ್ರ ಸ್ಥಾಪನೆಗೆ ಪ್ರಯತ್ನಿಸಿ ಸಫಲರಾದವರು. ತುಂಬೆಯ ಶಿಲ್ಪಿ ದಿ. ಬಿ.ಅಹ್ಮದ್ ಹಾಜಿ ಅವರ ಒಡನಾಡಿಯಾಗಿದ್ದ ಶೆಣೈ ಅವರು ಅಪ್ಪಟ ದೇಶಪ್ರೇಮಿ ಹಾಗೂ ಜಾತ್ಯಾತೀತ ಪರಂಪರೆಯ ನೈಜ ವ್ಯಕ್ತಿತ್ವವನ್ನು ಹೊಂದಿದವರು ಎಂದು ಹೇಳಿದರು.
ಮುಹಿಯುದ್ದೀನ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಬಿ.ಅಬ್ದುಲ್ ಸಲಾಂ, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಚಂದ್ರ ಪ್ರಕಾಶ್ ಶೆಟ್ಟಿ ತುಂಬೆ, ಸೇವಾಂಜಲಿ ಪ್ರತಿಷ್ಠಾನದ ಆಡಳಿತ ಟ್ರಸ್ಟಿ ಕೃಷ್ಣಕುಮಾರ್ ಪೂಂಜ, ತುಂಬೆ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಕೆ.ಎನ್.ಗಂಗಾಧರ ಆಳ್ವ ನುಡಿನಮನ ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ತಾಲೂಕು ಪಂಚಾಯತ್ ಮಾಜಿ ಉಪಾಧ್ಯಕ್ಷ ಅಬ್ಬಾಸ್ ಅಲಿ, ಕಾಲೇಜಿನ ಮುಖ್ಯೋಪಾಧ್ಯಾಯ ಶ್ರೀನಿವಾಸ್ ಕೆದಿಲ, ತುಂಬೆ ಗ್ರಾಮ ಪಂಚಾಯತ್ ಸದಸ್ಯ ಅಬ್ದಲ್ ಅಝೀಝ್, ತುಂಬೆ ಆಂಗ್ಲ ಮಾಧ್ಯಮ ರಕ್ಷಕ – ಶಿಕ್ಷಕ ಸಂಘದ ಅಧ್ಯಕ್ಷ ಬಶೀರ್ ತಂಡೇಲ್, ಉಪಾಧ್ಯಕ್ಷ ನಿಸಾರ್ ಅಹ್ಮದ್ ವಳವೂರು, ಪ್ರಕಾಶ್ ಶ್ರೀ ಶೈಲ ತುಂಬೆ, ಪುರಂದರ ಬಲ್ಯಾಯ, ದೈಹಿಕ ಶಿಕ್ಷಣ ಶಿಕ್ಷಕ ಜಗದೀಶ್ ರೈ, ಸಾಯಿರಾಮ್ ಜೆ. ನಾಯಕ್ ಉಪಸ್ಥಿತರಿದ್ದರು.
ಕಾಲೇಜಿನ ಕಚೇರಿ ಅಧೀಕ್ಷಕ ಬಿ.ಅಬ್ದುಲ್ ಕಬೀರ್ ಕಾರ್ಯಕ್ರಮ ನಿರೂಪಿಸಿದರು. ಅಶೋಕ್ ಕಾರ್ಯಕ್ರಮದಲ್ಲಿ ಸಹಕರಿಸಿದರು.








