ಸೈದ್ಧಾಂತಿಕ ಬೆಳವಣಿಗೆಗೆ ಮನುಷ್ಯ ಸಂಬಂಧವೇ ಮುಖ್ಯ: ಬರಗೂರು ರಾಮಚಂದ್ರಪ್ಪ

ಬರಗೂರು ರಾಮಚಂದ್ರಪ್ಪ
ಬೆಂಗಳೂರು, ಜ.3: ಯಾವುದೇ ಒಂದು ಸೈದ್ಧಾಂತಿಕ ಬೆಳವಣಿಗೆಗೆ ಮನುಷ್ಯ ಸಂಬಂಧವೇ ಮುಖ್ಯವಾಗುತ್ತದೆ. ಸಂಬಂಧವನ್ನು ಸ್ಥಾಪಿಸುವುದಕ್ಕಾಗಿ ನಾವು ವ್ಯಾಪ್ತಿ ಪ್ರದೇಶದ ಹೊರಗಿರಬಾರದು ಎಂದು ಸಾಹಿತಿ ಬರಗೂರು ರಾಮಚಂದ್ರಪ್ಪ ತಿಳಿಸಿದ್ದಾರೆ.
ಸೋಮವಾರದಂದು ನಗರದ ಶ್ರೀ ಕೃಷ್ಣರಾಜ ಪರಿಷನ್ಮಂದಿರದಲ್ಲಿ ಕನ್ನಡ ಜಾನಪದ ಪರಿಷತ್ ಆಯೋಜಿಸಿದ್ದ ಡಾ. ಸುಜಾತ ಲಕ್ಷ್ಮೀಪುರರ `ನವೋದಯ ವಿಮರ್ಶಾ ಸಾಹಿತ್ಯದ ಸ್ವರೂಪ', `ವಿಚಾರವಾದಿ ಕುವೆಂಪು' ಹಾಗೂ `ವ್ಯಾಪ್ತಿ ಪ್ರದೇಶದಿಂದ ಹೊರಗಿದ್ದಾರೆ' ಕೃತಿಗಳ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಒಂದು ನಿರ್ದಿಷ್ಟ ಕಾಲದಲ್ಲಿ ಬದುಕುತ್ತಿರುವರು ಭಿನ್ನಾಭಿಪ್ರಾಯದಲ್ಲಿದ್ದರೂ, ಮನುಷ್ಯ ಸಂಬಂಧಗಳನ್ನು ಸ್ಥಾಪಿಸಿಕೊಳ್ಳಬೇಕು. ಇಲ್ಲದಿದ್ದರೆ, ಯಾವುದೇ ಸಿದ್ಧಾಂತಗಳನ್ನು ಕ್ರಿಯಾಶೀಲಗೊಳಿಸಲು ಸಾಧ್ಯವಾಗುವುದಿಲ್ಲ. ಹಾಗಾಗಿ ವ್ಯಾಪ್ತಿ ಪ್ರದೇಶದಿಂದ ಹೊರಗೆ ಇರಬಾರದು. ಆಗ ನಿಜವಾದ ಪ್ರಜಾಪ್ರಭುತ್ವಕ್ಕೆ ಅರ್ಥ ಸಿಗುತ್ತದೆ ಎಂದರು.
ಬರೆಯುವವರು ಏಕಾಂತದಲ್ಲಿರಬೇಕು, ಆದರೆ ಲೋಕಾಂತವೇ ಇಲ್ಲದೆ ಯಾವುದೇ ಬರವಣಿಗೆಗೆ ಏಕಾಂತವಿರುವುದಿಲ್ಲ. ಈ ನಿಟ್ಟಿನಲ್ಲಿ ಲೋಕಾಂತದಲ್ಲಿ ಗಳಿಸಿದ್ದನ್ನು ಏಕಾಂತದಲ್ಲಿ ನಿರ್ಮಿಸಬಹುದಾಗಿದೆ. ಲೋಕಾಂತ ಮತ್ತು ಏಕಾಂತದ ನಡುವೆ ಮನುಷ್ಯ ಸಂಬಂಧಗಳಿವೆ ಎಂದು ಅವರು ಹೇಳಿದರು.
ಕಾರ್ಯಕ್ರಮದಲ್ಲಿ ವಿಮರ್ಶಕ ಡಾ. ಬಸವರಾಜ ಸಿ. ಕಲ್ಗುಡಿ, ರಾಜ್ಯ ಖಜಾನೆ ಇಲಾಖೆ ಜಂಟಿ ನಿರ್ದೇಶಕಿ ವಿ. ಭಾಗ್ಯಲಕ್ಷ್ಮಿ, ಕನ್ನಡ ಜಾನಪದ ಪರಿಷತ್ತು ಬೆಂಗಳೂರು ಜಿಲ್ಲೆ ಅಧ್ಯಕ್ಷ ಡಾ. ರಾಜ ಗುಂಡಾಪುರ, ಲೇಖಕಿ ಡಾ.ಬಿ.ಮಂಜುಳಾ ಸೇರಿದಂತೆ ಮತ್ತಿತರ ಗಣ್ಯರು ಇದ್ದರು.







