ಮುಂಬೈ ಏರ್ಪೋರ್ಟ್ನಲ್ಲಿ ಕೋವಿಡ್ ಪರೀಕ್ಷೆಯಲ್ಲಿ ಗೋಲ್ಮಾಲ್: ಭಾರತ ಮೂಲದ ಬ್ರಿಟಿಷ್ ಪ್ರಜೆ ಆರೋಪ

ಸಾಂದರ್ಭಿಕ ಚಿತ್ರ:PTI
ಮುಂಬೈ,ಜ.3: ಮುಂಬೈ ವಿಮಾನ ನಿಲ್ದಾಣದಲ್ಲಿ ಕೋವಿಡ್ ಪರೀಕ್ಷೆ ಮತ್ತು ಕ್ವಾರಂಟೈನ್ ಶಿಷ್ಟಾಚಾರದ ಹೆಸರಿನಲ್ಲಿ ಹಣವನ್ನು ಪೀಕಿಸಲು ಗೋಲ್ಮಾಲ್ ನಡೆಯುತ್ತಿದೆ ಎಂದು ಭಾರತೀಯ ಮೂಲದ ಬ್ರಿಟಿಷ್ ಪ್ರಜೆಯೋರ್ವರು ಆರೋಪಿಸಿದ್ದಾರೆ.
ತನ್ನ ಮಾವನ ಅಂತ್ಯಸಂಸ್ಕಾರದಲ್ಲಿ ಪಾಲ್ಗೊಳ್ಳಲೆಂದು ಮನೋಜ ಲದ್ವಾ ಅವರು ಪತ್ನಿ ಶರ್ಮಿಲಿ ಜೊತೆ ಡಿ.30ರಂದು ಮುಂಬೈಗೆ ಆಗಮಿಸಿದ್ದರು. ವಿಮಾನ ನಿಲ್ದಾಣದ ಪರೀಕ್ಷಾ ಕೇಂದ್ರದಲ್ಲಿ ತಪಾಸಣೆಗೊಳಗಾಗಿದ್ದ ಅವರು ಕೋವಿಡ್ಗೆ ಪಾಸಿಟಿವ್ ಆಗಿದ್ದರು.
ಲಂಡನ್ನಿನ ಹಿಥ್ರೋ ವಿಮಾನ ನಿಲ್ದಾಣದಲ್ಲಿ ವಿಮಾನವನ್ನು ಹತ್ತುವ ಮುನ್ನ ನೆಗೆಟಿವ್ ವರದಿಯನ್ನು ಹೊಂದಿದ್ದ ಲದ್ವಾ,ಮುಂಬೈನಲ್ಲಿ ದೃಢೀಕರಣಕ್ಕಾಗಿ ಎರಡನೇ ಕೋವಿಡ್ ಪರೀಕ್ಷೆಯನ್ನು ನಡೆಸುವಂತೆ ತಾನು ಕೋರಿದ್ದೆ,ಆದರೆ ಅದನ್ನು ನಿರಾಕರಿಸಲಾಗಿತ್ತು ಎಂದು ವಿಮಾನ ನಿಲ್ದಾಣದಲ್ಲಿ ಚಿತ್ರೀಕರಿಸಿದ್ದ ಫೇಸ್ಬುಕ್ ಲೈವ್ ವೀಡಿಯೊದಲ್ಲಿ ಹೇಳಿದ್ದಾರೆ. ಅವರನ್ನು ಸರಕಾರದ ಕ್ವಾರಂಟೈನ್ ಕೇಂದ್ರಕ್ಕೆ ರವಾನಿಸಲಾಗಿದ್ದು,ಮಾವನ ಅಂತ್ಯಸಂಸ್ಕಾರವನ್ನು ತಪ್ಪಿಸಿಕೊಂಡಿದ್ದಾರೆ ಎಂದು ಹೇಳಲಾಗಿದೆ.
‘ಮುಂಬೈ ವಿಮಾನ ನಿಲ್ದಾಣದಲ್ಲಿ ನಾನು ಪವಾಡಸದೃಶವಾಗಿ ಕೋವಿಡ್ಗೆ ಪಾಸಿಟಿವ್ ಆಗಿದ್ದೇನೆ. ನೋಡಿ,ಈ ನಾಲ್ವರು ಸಹ ನಾವು ಆಗಮಿಸಿರುವ ವರ್ಜಿನ್ ವಿಮಾನದಲ್ಲಿಯೇ ಬಂದಿದ್ದಾರೆ. ಅಂದರೆ ನಿನ್ನೆ ನೆಗೆಟಿವ್ ಆಗಿದ್ದ,ಆದರೆ ಇಂದು ಪಾಸಿಟಿವ್ ಆಗಿರುವ ಅಷ್ಟೊಂದು ಜನರ ಪ್ರಯಾಣಕ್ಕೆ ವರ್ಜಿನ್ ಅವಕಾಶ ನೀಡಿತ್ತು ಎಂದಾಯಿತು ’ಎಂದು ಹೇಳಿರುವ ಲದ್ವಾ,ಈ ಬಗ್ಗೆ ಧ್ವನಿಯೆತ್ತುವಂತೆ ತನ್ನ ಗೆಳೆಯರಿಗೆ ಮತ್ತು ಸಹಪ್ರಯಾಣಿಕರನ್ನು ಕೋರಿದ್ದು ವೀಡಿಯೊದಲ್ಲಿ ದಾಖಲಾಗಿದೆ.
‘ನಾವು ಅಂತ್ಯಸಂಸ್ಕಾರದಲ್ಲಿ ಪಾಲ್ಗೊಳ್ಳಲು ಇಲ್ಲಿವೆ ಧಾವಿಸಿದ್ದೇವೆ,ಆದರೆ ಈ ಜನರು ಪರೀಕ್ಷೆಯಲ್ಲಿ ಗೋಲ್ಮಾಲ್ ನಡೆಸಿ ನಮ್ಮಿಂದ ಹೆಚ್ಚು ಹಣ ಪೀಕಲು ಪ್ರಯತ್ನಿಸುತ್ತಿದ್ದಾರೆ ’ಎಂದು ಲದ್ವಾ ಆರೋಪಿಸಿದ್ದಾರೆ.
‘ವಿಮಾನ ನಿಲ್ದಾಣದಲ್ಲಿ ಅಧಿಕಾರಿಗಳ ಎದುರು ಲ್ಯಾಟರಲ್ ಫ್ಲೋ ಟೆಸ್ಟ್ಗೆ ಒಳಗಾಗಿದ್ದೆ ಮತ್ತು ರಿಪೋರ್ಟ್ ನೆಗೆಟಿವ್ ಆಗಿತ್ತು,ಆದರೆ ನಾನು ಕೋವಿಡ್ಗೆ ಪಾಸಿಟಿವ್ ಆಗಿದ್ದೇನೆ ಎಂದು ಅವರು ವಾದಿಸುತ್ತಿದ್ದಾರೆ ’ಎಂದಿರುವ ಲದ್ವಾ,ತಾನು ಸ್ವತಂತ್ರ ಪರೀಕ್ಷೆಯನ್ನು ಬಯಸಿದ್ದೇನೆ,ಆದರೆ ಅವರು ಅದಕ್ಕೆ ನಿರಾಕರಿಸಿದ್ದಾರೆ. ತಾನು ವಿಮಾನ ನಿಲ್ದಾಣದಲ್ಲಿ ನಾಲ್ಕು ಗಂಟೆಗಳ ಕಾಲ ಸಿಕ್ಕಿಹಾಕಿಕೊಂಡಿದ್ದೆ ಎಂದು ಆರೋಪಿಸಿದ್ದಾರೆ.
ವೀಡಿಯೊ ಕ್ಲಿಪ್ನಲ್ಲಿ ಪರೀಕ್ಷೆ ಮತ್ತು ಕ್ವಾರಂಟೈನ್ ಶಿಷ್ಟಾಚಾರದ ಕುರಿತು ಇತರ ಪ್ರಯಾಣಿಕರೂ ಸಿಟ್ಟಿನಿಂದ ದೂರಿಕೊಂಡಿರುವುದನ್ನು ಕೇಳಬಹುದಾಗಿದೆ.







