ಇರಾನ್ ಸೇನಾಧಿಕಾರಿಯ ಹತ್ಯೆಯ ವಾರ್ಷಿಕ ದಿನ ಇಸ್ರೇಲ್ ವೆಬ್ಸೈಟ್ ಹ್ಯಾಕ್; ಎಚ್ಚರಿಕೆಯ ಸಂದೇಶ ರವಾನೆ

ಸಾಂದರ್ಭಿಕ ಚಿತ್ರ
ಜೆರುಸಲೇಂ, ಜ.3: ಇರಾನ್ನ ಉನ್ನತ ಸೇನಾಧಿಕಾರಿ ಖಾಸಿಂ ಸುಲೈಮಾನಿಯ ಹತ್ಯೆ ಪ್ರಕರಣದ ವಾರ್ಷಿಕ ದಿನದಂದು ಇಸ್ರೇಲ್ ದಿನಪತ್ರಿಕೆಯ ವೆಬ್ಸೈಟ್ ಅನ್ನು ಹ್ಯಾಕ್ ಮಾಡಲಾಗಿದ್ದು , ಅದರಲ್ಲಿರುವ ವಿಷಯವನ್ನು ಬದಲಿಸಿ ಬೆದರಿಕೆ ಹಾಕುವ ರೀತಿಯ ಚಿತ್ರವನ್ನು ಅಳವಡಿಸಲಾಗಿದೆ ಎಂದು ವರದಿಯಾಗಿದೆ.
ಹ್ಯಾಕ್ ಮಾಡಿರುವ ಹೊಣೆಯನ್ನು ಯಾವುದೇ ಸಂಘಟನೆ ವಹಿಸಿಕೊಂಡಿಲ್ಲ. ಜೆರುಸಲೇಂ ಪೋಸ್ಟ್ ದಿನಪತ್ರಿಕೆಯ ವೆಬ್ಸೈಟ್ನಲ್ಲಿ ಪೋಸ್ಟ್ ಮಾಡಿರುವ ಚಿತ್ರದಲ್ಲಿ ಖಾಸಿಂ ಸುಲೈಮಾನಿಗೆ ಸಂಬಂಧಿಸಿದ ರಿಂಗ್ ಅನ್ನು ಹೊಂದಿರುವ ಮುಷ್ಟಿಯಿಂದ ಕ್ಷಿಪಣಿಯೊಂದು ತೂರಿ ಬರುವ ದೃಶ್ಯವಿದೆ. ಅಲ್ಲದೆ ಇತ್ತೀಚೆಗೆ ಇರಾನ್ ನಡೆಸಿದ್ದ ಮಿಲಿಟರಿ ಕವಾಯತಿನಲ್ಲಿ ಸ್ಫೋಟದ ಗುರಿಯಾಗಿದ್ದ ಇಸ್ರೇಲ್ನ ಶಿಮೋನ್ ಪೆರೆಸ್ ನೆಗೆವ್ ಪರಮಾಣು ಸಂಶೋಧನಾ ಕೇಂದ್ರವನ್ನು ಹೋಲುವ ಚಿತ್ರವನ್ನೂ ಇಲ್ಲಿ ನೀಡಲಾಗಿದೆ. 2 ವರ್ಷದ ಹಿಂದೆ ಅಮೆರಿಕ ನಡೆಸಿದ ಡ್ರೋನ್ ದಾಳಿಯಲ್ಲಿ ಇರಾನ್ನ ಉನ್ನತ ಸೇನಾಧಿಕಾರಿ ಖಾಸಿಂ ಸುಲೈಮಾನ್ ಹತರಾಗಿದ್ದರು.
ಇಸ್ರೇಲ್ನ ಡಿಮೋನಾ ನಗರದ ಬಳಿ ಇರುವ ಶಿಮೋನ್ ಪೆರೆಸ್ ಪರಮಾಣು ಸಂಶೋಧನಾ ಕೇಂದ್ರದಲ್ಲಿರುವ ಭೂಗತ ಪ್ರಯೋಗಾಲಯದಲ್ಲಿ ಇಸ್ರೇಲ್ನ ಪರಮಾಣು ಬಾಂಬ್ ಅಭಿವೃದ್ಧಿ ಕಾರ್ಯಕ್ರಮಕ್ಕೆ ಅಗತ್ಯವಿರುವ ಪ್ಲುಟೋನಿಯಂ ಸಂಸ್ಕರಿಸುವ ಕಾರ್ಯ ನಡೆಯುತ್ತದೆ.
ಪತ್ರಿಕೆಯ ವೆಬ್ಸೈಟ್ ಹ್ಯಾಕ್ ಆಗಿರುವುದನ್ನು ಜೆರುಸಲೇಂ ಪೋಸ್ಟ್ ಒಪ್ಪಿಕೊಂಡಿದೆ. ಇಸ್ರೇಲ್ಗೆ ನೇರ ಬೆದರಿಕೆಯ ಜತೆಗೆ ನಮ್ಮ ವೆಬ್ಸೈಟ್ ಹ್ಯಾಕ್ ಆಗಿರುವುದು ನಮ್ಮ ಗಮನಕ್ಕೆ ಬಂದಿದೆ. ಈ ಪ್ರಕರಣವನ್ನು ಇತ್ಯರ್ಥಗೊಳಿಸಲು ಕಾರ್ಯನಿರ್ವಹಿಸುತ್ತಿದ್ದೇವೆ ಮತ್ತು ಪರಿಸ್ಥಿತಿಯನ್ನು ಅರ್ಥ ಮಾಡಿಕೊಂಡು ಸಂಯಮ ವಹಿಸಿದ ಓದುಗರಿಗೆ ಅಭಿನಂದನೆಗಳು ಎಂದು ಇಂಗ್ಲಿಷ್ ಭಾಷೆಯ ದಿನಪತ್ರಿಕೆಯ ಹೇಳಿಕೆ ತಿಳಿಸಿದೆ.
ಹ್ಯಾಕಿಂಗ್ ಪ್ರಕರಣದ ಬಗ್ಗೆ ಇಸ್ರೇಲ್ ಸರಕಾರ ಅಥವಾ ಇರಾನ್ ಸರಕಾರ ಇದುವರೆಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
2020ರ ಜನವರಿ 3ರಂದು, ಇಸ್ಲಾಮಿಕ್ ರೆವೊಲ್ಯುಷನರಿ ಗಾರ್ಡ್ ಕಾರ್ಪ್ಸ್ನ ಖುಡ್ಸ್ ಪಡೆಯ ಅಂದಿನ ಕಮಾಂಡರ್ ಆಗಿದ್ದ ಸೊಲೈಮಾನಿ ಇರಾಕ್ನ ರಾಜಧಾನಿ ಬಗ್ದಾದ್ಗೆ ರಾಜತಾಂತ್ರಿಕ ನಿಯೋಗದಲ್ಲಿ ತೆರಳಿದ್ ಸಂದರ್ಭ ಅವರು ಸಾಗುತ್ತಿದ್ದ ವಾಹನಗಳ ಸಾಲಿನ ಮೇಲೆ ಅಮೆರಿಕದ ಡ್ರೋನ್ ವಿಮಾನ ಕ್ಷಿಪಣಿ ಪ್ರಯೋಗಿಸಿದಾಗ ಸೊಲೈಮಾನಿ ಮೃತಪಟ್ಟಿದ್ದರು. ಜೊತೆಗೆ, ಇರಾಕ್ ಸೇನಾ ಕಮಾಂಡರ್ ಅಬು ಮಹದಿ ಅಲ್ ಮುಹಾಂದಿಸ್ ಸಹಿತ ಇತರ ಹಲವರು ಮೃತಪಟ್ಟಿದ್ದರು.







