ಶಾಲೆಗಳಲ್ಲಿ ಸರಕಾರದ 'ಸೂರ್ಯ ನಮಸ್ಕಾರ' ಕಾರ್ಯಕ್ರಮಕ್ಕೆ ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ವಿರೋಧ

Representational Image
ಹೊಸದಿಲ್ಲಿ: ಭಾರತದ ಸ್ವಾತಂತ್ರ್ಯದ 75 ವರ್ಷಗಳ ಆಚರಣೆಯ ಅಂಗವಾಗಿ ದೇಶಾದ್ಯಂತ ಶಾಲೆಗಳಲ್ಲಿ 'ಸೂರ್ಯ ನಮಸ್ಕಾರ' ಕಾರ್ಯಕ್ರಮವನ್ನು ಆಯೋಜಿಸುವ ಕೇಂದ್ರದ ನಿರ್ದೇಶನವನ್ನು ವಿರೋಧಿಸಿರುವ ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ (ಎಐಎಂಪಿಎಲ್ಬಿ) ಇದು ಸೂರ್ಯ ಪೂಜೆಯ ಒಂದು ರೂಪವಾಗಿದೆ. ಇಸ್ಲಾಂನಲ್ಲಿ ಇದನ್ನು ಅನುಮತಿಸಲಾಗುವುದಿಲ್ಲ ಎಂದು ಹೇಳಿದೆ.
ಎಐಎಂಪಿಎಲ್ಬಿ ಬಿಡುಗಡೆ ಮಾಡಿದ ಅಧಿಕೃತ ಹೇಳಿಕೆಯಲ್ಲಿ, ಸಂಘಟನೆಯ ಪ್ರಧಾನ ಕಾರ್ಯದರ್ಶಿ ಮೌಲಾನಾ ಖಾಲಿದ್ ಸೈಫುಲ್ಲಾ ರಹಮಾನಿ ಅವರು ಇಂತಹ ಕಾರ್ಯಕ್ರಮಗಳಲ್ಲಿ ಮುಸ್ಲಿಮ್ ವಿದ್ಯಾರ್ಥಿಗಳು ಭಾಗವಹಿಸದಂತೆ ಕೇಳಿಕೊಂಡಿದ್ದಾರೆ.
ಭಾರತವು ಜಾತ್ಯತೀತ, ಬಹು-ಧಾರ್ಮಿಕ ಹಾಗೂ ಬಹು-ಸಾಂಸ್ಕೃತಿಕ ದೇಶವಾಗಿದೆ. ಈ ತತ್ವಗಳ ಆಧಾರದ ಮೇಲೆ ನಮ್ಮ ಸಂವಿಧಾನವನ್ನು ಬರೆಯಲಾಗಿದೆ. ಸರಕಾರಿ ಶಿಕ್ಷಣ ಸಂಸ್ಥೆಗಳಲ್ಲಿ ನಿರ್ದಿಷ್ಟ ಧರ್ಮದ ಬೋಧನೆಗಳನ್ನು ಬೋಧಿಸಲು ಅಥವಾ ನಿರ್ದಿಷ್ಟ ಗುಂಪಿನ ನಂಬಿಕೆಗಳ ಆಧಾರದ ಮೇಲೆ ಆಚರಣೆಗಳನ್ನು ಆಯೋಜಿಸಲು ಸಂವಿಧಾನವು ನಮಗೆ ಅನುಮತಿಸುವುದಿಲ್ಲ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
ಪ್ರಸ್ತುತ ಸರಕಾರ ಜಾತ್ಯತೀತ ತತ್ವದಿಂದ ಹಿಂದೆ ಸರಿದು ಬಹುಸಂಖ್ಯಾತ ಸಮುದಾಯದ ಸಿದ್ಧಾಂತ ಮತ್ತು ಸಂಪ್ರದಾಯವನ್ನು ದೇಶದ ಎಲ್ಲ ವರ್ಗಗಳ ಮೇಲೆ ಹೇರಲು ಯತ್ನಿಸುತ್ತಿದೆ ಎಂದು ರಹಮಾನಿ ಹೇಳಿದ್ದಾರೆ.
75 ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ, ಭಾರತ ಸರಕಾರದ ಕಾರ್ಯದರ್ಶಿ ಅಡಿಯಲ್ಲಿ, ಶಿಕ್ಷಣ ಸಚಿವಾಲಯವು ರಾಜ್ಯಗಳಲ್ಲಿ ಸೂರ್ಯ ನಮಸ್ಕಾರ ಯೋಜನೆಯನ್ನು ನಡೆಸಲು ನಿರ್ಧರಿಸಿದೆ ಎಂಬುದು ಸ್ಪಷ್ಟವಾಗಿದೆ. ಇದರಲ್ಲಿ 30 ಸಾವಿರ ಶಾಲೆಗಳು ಮೊದಲ ಹಂತದಲ್ಲಿ ವ್ಯಾಪ್ತಿಗೆ ಬರುತ್ತವೆ. ಈ ಕಾರ್ಯಕ್ರಮವನ್ನು ಜನವರಿ 1 ರಿಂದ ಜನವರಿ 7 ರವರೆಗೆ ಪ್ರಸ್ತಾಪಿಸಲಾಗಿದೆ. ಜನವರಿ 26 ರಂದು ಸೂರ್ಯ ನಮಸ್ಕಾರದ ಕುರಿತು ಸಂಗೀತ ಕಾರ್ಯಕ್ರಮವನ್ನು ಸಹ ಯೋಜಿಸಲಾಗಿದೆ. ಇದು ಅಸಾಂವಿಧಾನಿಕ ಮತ್ತು ದೇಶಭಕ್ತಿಯ ಸುಳ್ಳು ಪ್ರಚಾರವಾಗಿದೆ ಎಂದು ಅವರು ಹೇಳಿದರು.
All India Muslim Personal Law Board opposes Govt directive to organize 'Surya Namaskar' program in schools between Jan 1-Jan 7 on the 75th anniversary of Independence Day; says 'Surya Namaskar' is a form of Surya puja and Islam does not allow it pic.twitter.com/KcUq2xAGIm
— ANI (@ANI) January 4, 2022







