ಗಂಗೊಳ್ಳಿ ಎಸ್ಸೈ ವಜಾಕ್ಕೆ ಆಗ್ರಹಿಸಿ ಎಸ್‌ಡಿಪಿಐಯಿಂದ ಎಸ್ಪಿಗೆ ಮನವಿ

ಉಡುಪಿ, ಜ.4: ಗಂಗೊಳ್ಳಿಯ ಅಮಾಯಕ ಇಬ್ರಾಹಿಂ ವಿರುದ್ಧ ಸುಳ್ಳು ಪ್ರಕರಣ ದಾಖಲಿಸಿ ಎನ್‌ಕೌಂಟರ್ ನಡೆಸಿ ಕೊಲೆ ಮಾಡಲು ಪ್ರಯತ್ನಿಸಿದ ಗಂಗೊಳ್ಳಿ ಠಾಣಾಧಿಕಾರಿ ನಂಜ ನಾಯಕ್‌ನನ್ನು ಕರ್ತವ್ಯದಿಂದ ವಜಾಗೊಳಿಸಬೇಕೆಂದು ಎಸ್‌ಡಿಪಿಐ ಉಡುಪಿ ಜಿಲ್ಲಾ ನಿಯೋಗ, ಇಂದು ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಷ್ಣುವರ್ಧನ್ ಅವರಿಗೆ ಮನವಿ ಸಲ್ಲಿಸಿತು.
ಪೊಲೀಸರು ದಾಖಲಿಸಿರುವ ಎಫ್‌ಐಆರ್‌ನಲ್ಲಿ ಡಿ.27ರಂದು ಬೆಳಗ್ಗೆ 8:15 ರ ವೇಳೆ ದನ ವಧೆ ಮಾಡುವ ಸಂದರ್ಭದಲ್ಲಿ ದಾಳಿ ನಡೆಸಿ ಇಬ್ರಾಹಿಂರನ್ನು ಬಂಧಿಸಿರುವುದಾಗಿ ನಮೂದಿಸಲಾಗಿದೆ. ಆದರೆ ಡಿ.26ರ ಸಂಜೆಯಿಂದಲೇ ಇಬ್ರಾಹಿಂ ಠಾಣೆಯಲ್ಲಿ ಇರುವುದಕ್ಕೆ ದಾಖಲೆಗಳಿವೆ. ಆದ್ದರಿಂದ ಅಮಾಯಕ ಇಬ್ರಾಹಿಂ ವಿರುದ್ಧ ಸುಳ್ಳು ಕೇಸು ದಾಖಲಿಸಿದ್ದಲ್ಲದೆ ಅವರನ್ನು ಎನ್‌ಕೌಂಟರ್ ಮಾಡಿ ಕೊಲೆ ಮಾಡುವ ಪ್ರಯತ್ನ ನಡೆದಿದೆವೆಂಬುದು ಇದರಿಂದ ಸ್ಪಷ್ಟವಾಗುತ್ತದೆ ಎಂದು ನಿಯೋಗ ಮನವಿಯಲ್ಲಿ ದೂರಿದೆ.
ಎಸ್ಸೈ ನಂಜನಾಯ್ಕ ವಿರುದ್ಧ ಇಂತಹ ಹಲವು ಆರೋಪಗಳಿವೆ. ಕೆಲ ಸಮಯದ ಹಿಂದೆ ನಿರೀಕ್ಷಣಾ ಜಾಮೀನು ಪಡೆದಿದ್ದ ಇಬ್ಬರು ಯುವಕರನ್ನು ಠಾಣೆಗೆ ಕರೆಸಿ ಅವರಿಗೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದಂತಹ ಘಟನೆ ಸಹ ನಡೆದಿವೆ. ಆದುದರಿಂದ ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿ ಸೂಕ್ತ ತನಿಖೆ ನಡೆಸಿ ನಂಜನಾಯ್ಕನನ್ನು ಕೆಲಸದಿಂದ ವಜಾ ಮಾಡಿಕೊಳ್ಳಬೇಕೆಂದು ಎಂದು ನಿಯೋಗ ಮನವಿಯಲ್ಲಿ ಆಗ್ರಹಿಸಿದೆ.
ನಿಯೋಗದಲ್ಲಿ ಎಸ್‌ಡಿಪಿಐ ಜಿಲ್ಲಾಧ್ಯಕ್ಷ ನಜೀರ್ ಅಹ್ಮದ್, ಜಿಲ್ಲಾ ಉಪಾಧ್ಯಕ್ಷ ಶಾಹಿದ್ ಅಲಿ ಮತ್ತು ಜುರೈ ಉಪಸ್ಥಿತರಿದ್ದರು.







