ಉಡುಪಿ : ಒಂದೇ ದಿನದಲ್ಲಿ 72 ಕೊರೋನ ಪಾಸಿಟಿವ್ ಪ್ರಕರಣ

ಉಡುಪಿ : ಜಿಲ್ಲೆ ಮತ್ತೆ ಕೊರೋನ ಸೋಂಕು ಸ್ಪೋಟಗೊಳ್ಳುವತ್ತ ಸಾಗುತಿದ್ದು, ಒಂದೇ ದಿನದಲ್ಲಿ 72 ಕೊರೋನ ಪಾಸಿಟಿವ್ ಪ್ರಕರಣ ಪತ್ತೆಯಾಗಿದೆ. ಹೊಸ ವರ್ಷದ ನಾಲ್ಕೇ ದಿನಗಳಲ್ಲಿ ಪತ್ತೆಯಾದ ಸೋಂಕಿತರ ಸಂಖ್ಯೆ 200ರಷ್ಟಿದೆ.
ದಿನದಲ್ಲಿ 10 ಮಂದಿ ಸೋಂಕಿನಿಂದ ಗುಣಮುಖರಾದರೆ, ಸೋಂಕಿಗೆ ಚಿಕಿತ್ಸೆಯಲ್ಲಿರುವವರ ಸಂಖ್ಯೆಯಲ್ಲೂ ಭಾರಿ ಹೆಚ್ಚಳ ಕಂಡುಬಂದಿದ್ದು 282ಕ್ಕೇರಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ನಾಗಭೂಷಣ ಉಡುಪ ತಿಳಿಸಿದ್ದಾರೆ.
ದಿನದಲ್ಲಿ ಪಾಸಿಟಿವ್ ಬಂದ 72 ಮಂದಿಯಲ್ಲಿ 38 ಮಂದಿ ಪುರುಷರಾದರೆ 34 ಮಂದಿ ಮಹಿಳೆಯರು. ಪಾಸಿಟಿವ್ ಬಂದವರಲ್ಲಿ 66 ಮಂದಿ ಉಡುಪಿ ತಾಲೂಕಿಗೆ ಸೇರಿದವರು. ಉಳಿದವರಲ್ಲಿ ಇಬ್ಬರು ಕುಂದಾಪುರ, ಮೂವರು ಕಾರ್ಕಳ ತಾಲೂಕಿಗೆ ಸೇರಿದ್ದರೆ, ಒಬ್ಬರು ಹೊರಜಿಲ್ಲೆಯವರಲ್ಲೂ ಸೋಂಕು ಪತ್ತೆ ಯಾಗಿದೆ. ಪಾಸಿಟಿವ್ ಬಂದ ಐವರಿಗೆ ಆಸ್ಪತ್ರೆಯಲ್ಲಿ ಹಾಗೂ ಉಳಿದ 67 ಮಂದಿಗೆ ಅವರವರ ಮನೆಗಳಲ್ಲೇ ಚಿಕಿತ್ಸೆ ನೀಡಲಾಗುತ್ತಿದೆ. ಇಂದು ಸಹ ಕೋವಿಡ್‌ಗೆ ಯಾರೂ ಬಲಿಯಾಗಿಲ್ಲ.
ಸೋಮವಾರ 10 ಮಂದಿ ರೋಗದಿಂದ ಗುಣಮುಖರಾಗುವ ಮೂಲಕ ಕೊರೋನದಿಂದ ಈವರೆಗೆ ಚೇತರಿಸಿಕೊಂಡವರ ಸಂಖ್ಯೆ 76,559ಕ್ಕೇರಿದೆ. ನಿನ್ನೆ ಜಿಲ್ಲೆಯಲ್ಲಿ 2128 ಮಂದಿಗೆ ಕೋವಿಡ್ ಪರೀಕ್ಷೆ ನಡೆಸಲಾಗಿದೆ. ಜಿಲ್ಲೆಯಲ್ಲಿ ಈವರೆಗೆ ಸೋಂಕಿಗೆ ಪಾಸಿಟಿವ್ ಬಂದವರ ಸಂಖ್ಯೆ 77,320ಕ್ಕೇರಿದೆ.
10,505 ಮಂದಿಗೆ ಲಸಿಕೆ: ಜಿಲ್ಲೆಯಲ್ಲಿ ಇಂದು 15ರಿಂದ 18 ವರ್ಷ ದೊಳಗಿನ 6706 ಮಂದಿ ಮಕ್ಕಳಿಗೆ ಮೊದಲ ಡೋಸ್ ಕೋವಿಡ್ ಲಸಿಕೆ ಕೋವ್ಯಾಕ್ಸಿನ್ ನೀಡಲಾಗಿದೆ. ಒಟ್ಟಾರೆಯಾಗಿ ಈವರೆಗೆ ಒಟ್ಟು 17,413 ಮಂದಿ ವಿದ್ಯಾರ್ಥಿಗಳು ಮೊದಲ ಡೋಸ್ ಲಸಿಕೆ ಪಡೆದಿದ್ದಾರೆ ಎಂದು ಆರೋಗ್ಯ ಇಲಾಖೆಯ ಮೂಲಗಳು ತಿಳಿಸಿವೆ.
ಜಿಲ್ಲೆಯಲ್ಲಿ ಮಂಗಳವಾರ ಸಂಜೆ 4:30ರವರೆಗೆ ಒಟ್ಟು 10,505 ಮಂದಿ ಕೋವಿಡ್ ಲಸಿಕೆ ಸ್ವೀಕರಿಸಿದ್ದಾರೆ. ಇವರಲ್ಲಿ 6706 ಮಂದಿ 15ರಿಂದ 18 ವರ್ಷದ ಮಕ್ಕಳು ಸೇರಿದಂತೆ ಒಟ್ಟು 9,419 ಮಂದಿ ಮೊದಲ ಡೋಸ್ ಹಾಗೂ 1086 ಮಂದಿ ಎರಡನೇ ಡೋಸ್ ಲಸಿಕೆ ಸ್ವೀಕರಿಸಿದ್ದಾರೆ ಎಂದು ಡಿಎಚ್‌ಓ ಡಾ.ನಾಗಭೂಷಣ ಉಡುಪ ತಿಳಿಸಿದ್ದಾರೆ.
ಲಸಿಕೆ ಪಡೆದವರಲ್ಲಿ 18 ವರ್ಷದಿಂದ 44 ವರ್ಷದೊಳಗಿನ 2624 ಮಂದಿ ಮೊದಲ ಡೋಸ್ ಹಾಗೂ 736 ಮಂದಿ ಎರಡನೇ ಡೋಸ್ ಲಸಿಕೆಯನ್ನು ಸ್ವೀಕರಿಸಿದರೆ, 45 ವರ್ಷ ಮೇಲಿನ 89 ಮಂದಿ ಮೊದಲ ಡೋಸ್ ಹಾಗೂ 348 ಮಂದಿ ಎರಡನೇ ಡೋಸ್ ಪಡೆದಿದ್ದಾರೆ. ತಲಾ ಓರ್ವ ಆರೋಗ್ಯ ಹಾಗೂ ಮುಂಚೂಣಿ ಕಾರ್ಯಕರ್ತರೂ ಎರಡನೇ ಡೋಸ್ ಲಸಿಕೆ ಸ್ವೀಕರಿಸಿದ್ದಾರೆ.
5 ಕಡೆ ಕಂಟೈನ್ ಮೆಂಟ್ ವಲಯ
ಕಳೆದೊಂದು ವಾರದಿಂದ ಉಡುಪಿ ತಾಲೂಕಿನ ಮಣಿಪಾಲದಲ್ಲಿ ಕೋವಿಡ್ ಸೋಂಕಿತರ ಸಂಖ್ಯೆಯಲ್ಲಿ ಏರಿಕೆ ಕಂಡುಬಂದಿದ್ದು, ಇದೀಗ ಮಣಿಪಾಲ ಆಸುಪಾಸಿನಲ್ಲಿ ಐದು ಕಂಟೈನ್ ಮೆಂಟ್ ವಲಯವನ್ನು ಮಾಡಲಾಗಿದೆ. ಮಣಿಪಾಲ ಎಂಐಟಿ ಕ್ಯಾಂಪಸ್ ನಲ್ಲಿ ಮೂರು ಹಾಗೂ ಮಣಿಪಾಲದ ಜಿಲ್ಲಾಧಿಕಾರಿ ಕಚೇರಿ ರಸ್ತೆಯಲ್ಲಿ ಎರಡು ವಸತಿ ಸಂಕೀರ್ಣಗಳನ್ನು ಕಂಟೈನ್ ಮೆಂಟ್ ವಲಯವಾಗಿ ಘೋಷಿಸಲಾಗಿದೆ ಎಂದು ತಿಳಿದುಬಂದಿದೆ.
ದೊಡ್ಡ ಸಂಖ್ಯೆಯಲ್ಲಿ ಹೊರರಾಜ್ಯ ಹಾಗೂ ವಿದೇಶಿ ವಿದ್ಯಾರ್ಥಿಗಳು ಕಲಿಯುತ್ತಿರುವ ಮಣಿಪಾಲದಲ್ಲಿ ಕೆಲವು ವಿದ್ಯಾರ್ಥಿಗಳು ಪಾಸಿಟಿವ್ ಬಂದಿದ್ದು, ಅವರ ಪ್ರಾಥಮಿಕ ಸಂಪರ್ಕಿತರು ಹೆಚ್ಚಿನ ಸಂಖ್ಯೆಯಲ್ಲಿ ಪಾಸಿಟಿವ್ ಬರುತಿದ್ದಾರೆ. ಹೀಗಾಗಿ ಮಣಿಪಾಲದ ವಿದ್ಯಾಸಂಸ್ಥೆಗಳಲ್ಲಿ ಕೋವಿಡ್ ಪರೀಕ್ಷೆಯನ್ನು ಹೆಚ್ಚಿಸಲಾಗಿದೆ ಎಂದು ಜಿಲ್ಲಾಡಳಿತ ಮೂಲಗಳು ತಿಳಿಸಿವೆ.







