ಮಂಗಳೂರು: ಯುನಿವೆಫ್‌ನಿಂದ ಕಾಲ್ನಡಿಗೆ ಜಾಥಾ

ಮಂಗಳೂರು, ಜ.4: ‘ಮಾನವೀಯ ಮೌಲ್ಯಗಳು ಹಾಗೂ ಪರಧರ್ಮ ಸಹಿಷ್ಣುತೆ ಮತ್ತು ಪ್ರವಾದಿ ಮುಹಮ್ಮದ್ (ಸ)’ ಎಂಬ ಕೇಂದ್ರೀಯ ವಿಷಯದಲ್ಲಿ ಯುನಿವೆಫ್ ಕರ್ನಾಟಕವು ಕಳೆದ ನವೆಂಬರ್ 5ರಿಂದ ಆರಂಭಿಸಿದ ‘ಅರಿಯಿರಿ ಮನುಕುಲದ ಪ್ರವಾದಿಯನ್ನು‘ ಅಭಿಯಾನದ ಸಮಾರೋಪವು ಜ.7ರಂದು ನಗರದ ಪುರಭವನದಲ್ಲಿ ಜರಗಲಿದೆ. ಈ ಸಮಾರೋಪ ಕಾರ್ಯಕ್ರಮದ ಪ್ರಚಾರದ ಪ್ರಯುಕ್ತ ರ ಮಂಗಳವಾರ ನಗರದಲ್ಲಿ ಕಾಲ್ನಡಿಗೆ ಜಾಥಾ ನಡೆಯಿತು.
ಕುದ್ರೋಳಿಯ ಜಾಮಿಯಾ ಮಸೀದಿಯ ಮುಂಭಾಗದಿಂದ ಹೊರಟ ಜಾಥಾವನ್ನು ಕಾರ್ಪೊರೇಟರ್ ಶಂಸುದ್ದೀನ್ ಕುದ್ರೋಳಿ ಉದ್ಘಾಟಿಸಿದರು. ಕಂಡತ್ ಪಳ್ಳಿ, ಬಂದರ್, ರಾವ್ ಅ್ಯಂಡ್ ರಾವ್ ಸರ್ಕಲ್, ಕ್ಲಾಕ್ ಟವರ್, ಎಬಿ ಶೆಟ್ಟಿ ಸರ್ಕಲ್ ಮೂಲಕ ಸಾಗಿದ ಜಾಥಾ ಸ್ಟೇಟ್‌ಬ್ಯಾಂಕ್‌ನ ಹ್ಯಾಮಿಲ್ಟನ್ ಸರ್ಕಲ್ ಬಳಿ ಸಮಾಪ್ತಿಗೊಂಡಿತು.
ಜಾಥಾದ ನೇತೃತ್ವವನ್ನು ಯುನಿವೆಫ್ ಅಧ್ಯಕ್ಷ ರಫೀಉದ್ದೀನ್ ಕುದ್ರೋಳಿ ವಹಿಸಿದ್ದರು. ಕಾರ್ಯದರ್ಶಿಗಳಾದ ಸೈಫುದ್ದೀನ್, ಯು.ಕೆ. ಖಾಲಿದ್, ಮಾಜಿ ಜಿಲ್ಲಾಧ್ಯಕ್ಷ ಅಬ್ದುಲ್ಲಾ ಪಾರೆ ಕಾರ್ನರ್ ಮೀಟಿಂಗ್‌ಗಳನ್ನು ನಡೆಸಿದರು. ಜಿಲ್ಲಾಧ್ಯಕ್ಷ ನೌಫಲ್ ಹಸನ್, ಅಭಿಯಾನ ಸಂಚಾಲಕ ವಕಾಝ್ ಅರ್ಶಲನ್, ಸಹ ಸಂಚಾಲಕ ಶಾಬಾನ್ ನಬೀಲ್, ಮಂಗಳೂರು ಶಾಖಾಧ್ಯಕ್ಷ ತಾಯಿಫ್ ಅಹ್ಮದ್, ಉಳ್ಳಾಲ ಶಾಖಾಧ್ಯಕ್ಷ ಫಝಲ್ ಮುಹಮ್ಮದ್ ಮತ್ತಿತರರ ಪಾಲ್ಗೊಂಡಿದ್ದರು.





