ಬೆಂಗಳೂರು: 300 ಕೋಟಿ ಮೌಲ್ಯದ ಅತಿಕ್ರಮ ಆಸ್ತಿ ವಶಕ್ಕೆ ಪಡೆದ ಬಿಡಿಎ

ಬೆಂಗಳೂರು, ಜ.4: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು ಖಾಸಗಿಯರಿಂದ ಒತ್ತುವರಿಯಾಗಿದ್ದ ರಾಜಾಜಿನಗರದಲ್ಲಿರುವ ಗ್ಯಾರೇಜ್, ತಾತ್ಕಾಲಿಕ ಶೆಡ್‍ಗಳನ್ನು ನೆಲಸಮಗೊಳಿಸಿ, ವಿಜಯನಗರದಲ್ಲಿರುವ ಪೆಟ್ರೋಲ್ ಬಂಕ್ ವಶಕ್ಕೆ ಪಡೆದುಕೊಂಡಿದೆ. ಈ ಮೂಲಕ ಬಿಡಿಎ ಒತ್ತುವರಿ ತೆರವು ಕಾರ್ಯಾಚರಣೆಯನ್ನು ಮುಂದುವರಿಸಿದೆ.
ರಾಜಾಜಿನಗರದ ಪ್ರಸನ್ನ ಚಿತ್ರಮಂದಿರದ ಬಳಿಯಿರುವ 175 ಕೋಟಿ ರೂ. ಮೌಲ್ಯದ ಬಿಡಿಎ ಜಾಗದಲ್ಲಿ ಖಾಸಗಿಯವರು ಅತಿಕ್ರಮವಾಗಿ 5 ತಾತ್ಕಾಲಿಕ ಶೆಡ್‍ಗಳನ್ನು ಮತ್ತು 1 ಗ್ಯಾರೇಜ್‍ಅನ್ನು ನಿರ್ಮಾಣ ಮಾಡಿದ್ದರು. ಈ ಕುರಿತು ಪ್ರಾಧಿಕಾರವು ಮಾಲಕರಿಗೆ ಹಲವು ಬಾರಿ ನೋಟಿಸ್ ನೀಡಿದ್ದರೂ, ಪ್ರಯೋಜನವಾಗಲಿಲ್ಲ. ಹಾಗಾಗಿ ಬಿಡಿಎ ಅಧ್ಯಕ್ಷ ಎಸ್.ಆರ್.ವಿಶ್ವನಾಥ್ ಮತ್ತು ಆಯುಕ್ತ ರಾಜೇಶ್ ಗೌಡ ಮಾರ್ಗದರ್ಶನದಲ್ಲಿ ಬಿಡಿಎ ಪೊಲೀಸ್ ವರಿಷ್ಠಾಧಿಕಾರಿಗಳಾದ ಭಾಸ್ಕರ್ ಮತ್ತು ರವಿಕುಮಾರ್ ನೇತೃತ್ವದಲ್ಲಿ ಅತಿಕ್ರಮವಾಗಿ ನಿರ್ಮಿಸಲಾಗಿದ್ದ ತಾತ್ಕಾಲಿಕ ಶೆಡ್‍ಗಳು ಮತ್ತು ಗ್ಯಾರೇಜ್ ಅನ್ನು ತೆರವುಗೊಳಿಸಲಾಯಿತು.
ನ್ಯಾಯಾಲಯವು ಬಿಡಿಎ ಪರ ತೀರ್ಪು ನೀಡಿದ ಹಿನ್ನೆಲೆಯಲ್ಲಿ ಬಿಡಿಎ ಅಧಿಕಾರಿಗಳು ವಿಜಯನಗರ ಅತ್ತಿಗುಪ್ಪೆಯ ಕೆಂಪಾಪುರ ಅಗ್ರಹಾರದಲ್ಲಿ ಸರ್ವೇ ನಂಬರ್ 329/3 ರಲ್ಲಿ ಅತಿಕ್ರಮವಾಗಿ ನಿರ್ಮಾಣವಾಗಿದ್ದ 125 ಕೋಟಿ ರೂ. ಮೌಲ್ಯದ ಪೆಟ್ರೋಲ್ ಬಂಕ್ ಮತ್ತು ಖಾಲಿ ಜಾಗವನ್ನು ವಶಪಡಿಸಿಕೊಂಡಿದೆ.
ಬಿಡಿಎ ಆಸ್ತಿ ಎಂದರೆ ಸಾರ್ವಜನಿಕರ ಆಸ್ತಿ. ಆ ಆಸ್ತಿಯನ್ನು ಉಳಿಸಿ, ಸಾರ್ವಜನಿಕರ ಉಪಯೋಗಕ್ಕೆ ನೀಡುವುದು ಬಿಡಿಎ ಕರ್ತವ್ಯ. ಈ ನಿಟ್ಟಿನಲ್ಲಿ ನೂರಾರು ಕೋಟಿ ರೂಪಾಯಿ ಮೌಲ್ಯದ ನಮ್ಮ ಆಸ್ತಿಯನ್ನು ಪತ್ತೆ ಮಾಡಿ ವಶಪಡಿಸಿಕೊಳ್ಳುವಲ್ಲಿ ನಮ್ಮ ಅಧಿಕಾರಿಗಳು ಮತ್ತು ಸಿಬ್ಬಂದಿ ಪರಿಶ್ರಮ ವಹಿಸುತ್ತಿದ್ದಾರೆ.
-ಎಸ್.ಆರ್.ವಿಶ್ವನಾಥ್, ಅಧ್ಯಕ್ಷ, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ







