ತಪ್ಪನ್ನು ಗುರುತಿಸಿದರೆ ದೇಶದ್ರೋಹಿಯ ಪಟ್ಟ ಕಟ್ಟುತ್ತಾರೆ: ಸಿದ್ದರಾಮಯ್ಯ
`ಅಲ್ಪಸಂಖ್ಯಾತರು ಮತ್ತು ಜಾತಿ ವ್ಯವಸ್ಥೆ’ ಪುಸ್ತಕ ಬಿಡುಗಡೆ

ಬೆಂಗಳೂರು, ಜ.4: ನಾವು ಇಂದು ತಪ್ಪುಗಳನ್ನು ಗುರುತಿಸಿ, ಗಮನಕ್ಕೆ ತಂದರೆ ಸಾಕು ದೇಶದ್ರೋಹಿ, ಉಗ್ರರು ಎನ್ನುತ್ತಾರೆ ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.
ಮಂಗಳವಾರ ಇಲ್ಲಿನ ಗಾಂಧಿ ಭವನ ಸಭಾಂಗಣದಲ್ಲಿ ಡಾ.ಮುಝಫರ್ ಅಸ್ಸಾದಿ ಅವರ `ಅಲ್ಪಸಂಖ್ಯಾತರು ಮತ್ತು ಜಾತಿ ವ್ಯವಸ್ಥೆ ಅಸ್ಮಿತೆ, ವಸಾಹತುಶಾಹಿ ಮತ್ತು ಮೀಸಲಾತಿ’ ಪುಸ್ತಕ ಬಿಡುಗಡೆ ಸಮಾರಂಭವನ್ನುದ್ದೇಶಿಸಿ ಅವರು ಮಾತನಾಡಿದರು.
ಸಂವಿಧಾನ ಉಳಿಯಬೇಕು. ಇಲ್ಲದಿದ್ದರೆ ಮತ್ತೆ ನಾವು ಎಲ್ಲರೂ ಶೋಷಣೆಗೆ ಒಳಪಡುತ್ತೇವೆ. ಅದೇ ರೀತಿ, ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ರಕ್ಷಣೆ ಮಾಡಬೇಕು. ಇದಕ್ಕಾಗಿ ಎಲ್ಲರೂ ಒಗ್ಗೂಡಿ ಹೋರಾಟ ನಡೆಸಬೇಕಾಗಿದೆ. ಇತ್ತೀಚಿನ ದಿನಗಳಲ್ಲಿ ತಪ್ಪುಗಳನ್ನು ಖಂಡಿಸಿದರೆ ಅಥವಾ ಗುರುತಿಸಿದರೆ ಅವರನ್ನು ನೇರವಾಗಿ ದೇಶದ್ರೋಹಿಯ ಪಟ್ಟು ಕಟ್ಟುತ್ತಾರೆ. ಇಂತಹ ಬೆಳವಣಿಗೆ ಒಳ್ಳೆಯದಲ್ಲ ಎಂದು ನುಡಿದರು.
ವೈದ್ಯರು ಸೇರಿದಂತೆ ಇನ್ನಿತರರು ವಿಜ್ಞಾನ ಓದಿದರೂ ಮೂಢನಂಬಿಕೆ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುತ್ತಾರೆ. ಇದನ್ನು ಇಂದಿನ ದಿನಗಳಲ್ಲೂ ನಾವೂ ನೋಡಬಹುದಾಗಿದೆ. ಶಿಕ್ಷಣ ಸಿಕ್ಕಿದರೆ ಜ್ಞಾನ ವಿಕಾಸವಾಗುತ್ತದೆ, ಸಮಾಜದಲ್ಲಿ ಬದಲಾವಣೆ ಆಗುತ್ತದೆ ಎನ್ನುವ ಕಾಲ ಇತ್ತು. ಆದರೆ, ಇದೀಗ ಶಿಕ್ಷಣ ಸಿಕ್ಕರೂ, ಸಮಾಜದಲ್ಲಿ ಬದಲಾವಣೆ ಆಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಒಂದು ಮಾನವೀಯ ಮೌಲ್ಯವುಳ್ಳ ಸಮಾಜ ನಿರ್ಮಾಣಕ್ಕೆ ನಾವು ಬದ್ಧರಾಗಬೇಕಾಗಿದೆ ಎಂದ ಅವರು, ಸ್ವಾತಂತ್ರ್ಯ ಬಂದಾಗ ನಮ್ಮಲ್ಲಿ ಅಕ್ಷರಸ್ಥರ ಪ್ರಮಾಣ ತೀರ ಕಡಿಮೆ ಇತ್ತು. ಇವತ್ತು ಶೇ.78ರಷ್ಟಿದೆ. ಹೀಗಿದ್ದರೂ, ನಮ್ಮ ಸಾಮಾಜಿಕ ವ್ಯವಸ್ಥೆಯಲ್ಲಿ ದೊಡ್ಡ ಬದಲಾವಣೆ ಕಂಡುಬಂದಿಲ್ಲ. ಇದಕ್ಕೆ ನಾವು ಕಾರಣ ಮತ್ತು ಪರಿಹಾರಗಳನ್ನು ಕಂಡುಕೊಳ್ಳಬೇಕಾಗಿದೆ ಎಂದು ಸಿದ್ದರಾಮಯ್ಯ ಹೇಳಿದರು.
ಈ ಸಂದರ್ಭದಲ್ಲಿ ಹೈಕೋರ್ಟಿನ ವಿಶ್ರಾಂತ ನ್ಯಾಯಾಧೀಶ ಎಚ್.ಎನ್.ನಾಗಮೋಹನ್ ದಾಸ್, ಪತ್ರಕರ್ತೆ ಸಿಂಥಿಯಾ ಸ್ಪೀಫನ್, ಡಾ. ಮುಝಫರ್ ಅಸ್ಸಾದಿ ಸೇರಿದಂತೆ ಪ್ರಮುಖರಿದ್ದರು.






.jpg)
.jpg)
.jpg)

