ಬಿಜೆಪಿ ವರಿಷ್ಠರನ್ನು ಭೇಟಿಯಾದ ಉತ್ತರಾಖಂಡ್ ಕಾಂಗ್ರೆಸ್ ಮಾಜಿ ಅಧ್ಯಕ್ಷ: ಪಕ್ಷಾಂತರ ಗುಮಾನಿ

Photo: ANI
ಹೊಸದಿಲ್ಲಿ: ಉತ್ತರಾಖಂಡ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಕಿಶೋರ್ ಉಪಾಧ್ಯಾಯ ಬಿಜೆಪಿಯ ಹಿರಿಯ ನಾಯಕರುಗಳನ್ನು ಭೇಟಿ ಮಾಡಿದ್ದಾರೆ. ಆ ಮೂಲಕ, ಅವರು ಬಿಜೆಪಿಗೆ ಸೇರುವ ಬಗ್ಗೆ ಹರಿದಾಡುತ್ತಿದ್ದ ವದಂತಿಗೆ ಇನ್ನಷ್ಟು ಪುಷ್ಠಿ ನೀಡಿದ್ದಾರೆ.
ರಾಜ್ಯ ಬಿಜೆಪಿಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಅಜೇಯಕುಮಾರ್ ಅವರ ನಿವಾಸದಲ್ಲಿ ಬಿಜೆಪಿ ಚುನಾವಣಾ ಉಸ್ತುವಾರಿ ಪ್ರಹ್ಲಾದ್ ಜೋಶಿ ಅವರ ಸಮ್ಮುಖದಲ್ಲಿ ಭೇಟಿ ನಡೆದಿದೆ.
ಅದಾಗ್ಯೂ, ಬಿಜೆಪಿ ಸೇರುವ ವದಂತಿಯನ್ನು ತಳ್ಳಿ ಹಾಕಿರುವ ಉಪಾಧ್ಯಾಯ್, ಪಕ್ಷ ಬದಲಾವಣೆಯ ವದಂತಿಯನ್ನು ಯಾರೂ ನಂಬಬಾರದು. ವನಾಧಿಕಾರ ಆಂದೋಲನದ ಭಾಗವಾಗಿ ತಾನು ವಿವಿಧ ನಾಯಕರನ್ನು ಭೇಟಿಯಾಗುವುದಾಗಿ ತಿಳಿಸಿದ್ದಾರೆ.
ವನಾಧಿಕಾರ ಆಂದೋಲನ ಉತ್ತರಾಖಂಡ್ ಅರಣ್ಯ ನಿವಾಸಿಗಳ ಹಕ್ಕೊತ್ತಾಯಕ್ಕಾಗಿ ಹಾಗೂ ಅರಣ್ಯದ ಮೇಲೆ ಸ್ಥಳೀಯರ ಅಧಿಕಾರಕ್ಕಾಗಿನ ಚಳುವಳಿಯಾಗಿದ್ದು, ಉಪಾಧ್ಯಾಯ್ ಈ ಚಳುವಳಿಯನ್ನು ಪ್ರಾರಂಭಿಸಿದ್ದರು. ಇದೀಗ ಚುನಾವಣೆ ಸನ್ನಿಹಿತಗೊಂಡಿರುವಾಗ ಬಿಜೆಪಿ ವರಿಷ್ಟರೊಂದಿಗೆ ನಡೆಸಿರುವ ಖಾಸಗಿ ಸಭೆ ಸಾಕಷ್ಟು ಅನುಮಾನಕ್ಕೆ ಕಾರಣವಾಗಿದೆ. ಹಲವು ರಾಜಕಾರಣಿಗಳ ಪಕ್ಷನಿಷ್ಠೆ ದಿನಬೆಳಗಾಗುವುದರೊಳಗೆ ಬದಲಾಗುತ್ತಿರುವ ಹಿನ್ನೆಲೆಯಲ್ಲಿ ಈ ಸಂದೇಹ ಇನ್ನಷ್ಟು ಹೆಚ್ಚಾಗಿದೆ.





