ಗಡಿ ಒಳನುಸುಳುವಿಕೆ: 2021ರಲ್ಲಿ 1628 ನುಸುಳುಕೋರರ ಬಂಧನ ಕಳೆದ ಐದು ವರ್ಷಗಳಲ್ಲೇ ಗರಿಷ್ಠ

ಸಾಂದರ್ಭಿಕ ಚಿತ್ರ:PTI
ಹೊಸದಿಲ್ಲಿ,ಜ.5: ಹಿಂದಿನ 5 ವರ್ಷಗಳಿಗೆ ಹೋಲಿಸಿದರೆ 2021ರಲ್ಲಿ ಬಾಂಗ್ಲಾದೇಶ ಹಾಗೂ ಪಾಕಿಸ್ತಾನದ ಜೊತೆಗಿನ ಅಂತಾರಾಷ್ಟ್ರೀಯ ಗಡಿಗಳಲ್ಲಿ ದಾಖಲೆ ಸಂಖ್ಯೆಯ ಒಳನುಸುಳುವಿಕೆ ಯತ್ನದ ಪ್ರಕರಣಗಳು ವರದಿಯಾಗಿವೆ. ಕಳೆದ ವರ್ಷೆ 1628 ಮಂದಿ ಒಳನುಸುಳಕೋರರನ್ನು ಬಂಧಿಸಲಾಗಿದ್ದು, 18 ಮಂದಿಯನ್ನು ಹತ್ಯೆಗೈಯಲಾಗಿದೆ ಎಂದು ಸರಕಾರಿ ದತ್ತಾಂಶಗಳು ತಿಳಿಸಿವೆ.
2020ರಲ್ಲಿ 1252, 2019ರಲ್ಲಿ 1408, 2018ರಲ್ಲಿ 1173 ಹಾಗೂ 2017ರಲ್ಲಿ 1251 ಒಳನುಸುಳುಕೋರರನ್ನು ಬಂಧಿಸಲಾಗಿದೆ. ಇದರ ಜೊತೆಗೆ 2020ರಲ್ಲಿ 16, 2019ರಲ್ಲಿ ಆರು, 2018ರಲ್ಲಿ 8 ಹಾಗೂ 2017ರಲ್ಲಿ 11 ಮಂದಿ ಒಳನುಸುಳುಕೋರರನ್ನು ಹತ್ಯೆಗೈಯಲಾಗಿದೆ ಎಎನ್ಐ ಸುದ್ದಿಸಂಸ್ಥೆಗೆ ಲಭ್ಯವಾಗಿರುವ ಕೇಂದ್ರ ಗೃಹ ಸಚಿವಾಲಯದ ದತ್ತಾಂಶಗಳಿಂದ ತಿಳಿದುಬಂದಿದೆ.
2017 ಹಾಗೂ 2021ರ ನಡುವೆ ಗಡಿಭದ್ರತಾಪಡೆ (ಬಿಎಸ್ಎಫ್) ನಡೆಸಿದ ಕಾರ್ಯಾಚರಣೆಗಳನ್ನು ಆಧರಿಸಿ ಈ ದತ್ತಾಂಶಗಳನ್ನು ಸಂಗ್ರಹಿಸಲಾಗಿದೆ. ಈ ಐದು ವರ್ಷಗಳ ಅವಧಿಯಲ್ಲಿ ಭಾರತ-ಪಾಕ್ ಹಾಗೂ ಭಾರತ-ಪಾಕಿಸ್ತಾನ ಗಡಿಗಳ ಮೂಲಕ ಭಾರತದ ಭೂಪ್ರದೇಶವನ್ನು ಪ್ರವೇಶಿಸಲು ಯತ್ನಿಸಿದ ಒಟ್ಟು 6712 ಒಳನುಸುಳುಕೋರರನ್ನು ಬಂಧಿಸಲಾಗಿದೆ ಎಂದು ದತ್ತಾಂಶ ತಿಳಿಸಿದೆ.
2017 ಹಾಗೂ ಭಾರತ-ಪಾಕಿಸ್ತಾನ ಗಡಿ ಮೂಲಕ ಭಾರತೀಯ ಭೂಪ್ರದೇಶಗೊಳಗೆ ಪ್ರವೇಶಿಸಲು ಯತ್ನಿಸುತ್ತಿದ್ದ 269 ಮಂದಿಯನ್ನು ಬಂಧಿಸಲಾಗಿದ್ದರೆ, ಉಳಿದ 6444 ಮಂದಿ ಭಾರತ-ಬಾಂಗ್ಲಾ ಗಡಿ ಮೂಲಕ ಭಾರತವನ್ನು ಪ್ರವೇಶಿಸಲು ಯತ್ನಿಸಿದವರಾಗಿದ್ದಾರೆ.
ಭಾರತ-ಪಾಕಿಸ್ತಾನ ಗಡಿಯಲ್ಲಿ ಬಂಧಿತರಾದ 269 ಮಂದಿ ಒಳನುಸುಳುಕೋರರ ಪೈಕಿ ರಾಜಸ್ಥಾನದಿಂದ 60, ಜಮ್ಮುವಿನಿಂದ 19, ಪಂಜಾಬ್ ನಿಂದ 156 ಹಾಗೂ ರಾಜಸ್ಥಾನದಿಂದ 33 ಮಂದಿಯನ್ನು ಬಂಧಿಸಲಾಗಿದೆ.
ಭಾರತ-ಬಾಂಗ್ಲಾ ಗಡಿಯಲ್ಲಿ ಬಂಧಿತರಾದ 6,444 ಒಳನುಸುಳುಕೋರರ ಪೈಕಿ ಗರಿಷ್ಠ 4796 ಮಂದಿಯನ್ನು ಪಶ್ಚಿಮಬಂಗಾಳದ ದಕ್ಷಿಣ ಭಾಗದಲ್ಲಿ ಬಂಧಿಸಲಾಗಿದೆ. ಪಶ್ಚಿಮಬಂಗಾಳದ ಉತ್ತರ ಭಾಗದಿಂದ 558, ತ್ರಿಪುರಾದಿಂದ 248, ಮೇಘಾಲಯ, ಗುವಾಹಟಿಯಿಂದ 214 ,ಮಿಜೋರಾಂ, ಕಚಾರ್ನಿಂದ 43 ಮಂದಿಯನ್ನು ಬಂಧಿಸಲಾಗಿದೆ.







