ಹೊಸ ಪರೀಕ್ಷಾ ವಿಧಾನ ಕಲಿಯುವ ಸಲುವಾಗಿ CAT ಪರೀಕ್ಷೆ ಬರೆದು ಟಾಪರ್ ಗಳಾದ ದಂಪತಿ !

Photo: Indianexpress
ಅಹ್ಮದಾಬಾದ್: ತಮ್ಮಲ್ಲಿ ತರಬೇತಿ ಪಡೆಯುವ ವಿದ್ಯಾರ್ಥಿಗಳಿಗೆ ಇನ್ನಷ್ಟು ಪರಿಣಾಮಕಾರಿಯಾಗಿ ಪಾಠ ಮಾಡಬೇಕೆಂಬ ಉದ್ದೇಶದಿಂದ CAT ಪರೀಕ್ಷೆಗೆ ಹಾಜರಾದ ದಂಪತಿ ಅತೀ ಹೆಚ್ಚು ಅಂಕಗಳೊಂದಿಗೆ ಉತ್ತೀರ್ಣರಾಗಿದ್ದಾರೆ. ಮಾರುತಿ ಕೊಂಡುರಿ ಹಾಗೂ ಸಯಾಲಿ ಕಾಳೆ ಕಠಿಣ CAT ಪರೀಕ್ಷೆಯಲ್ಲಿ ಉತ್ತೀರ್ಣರಾದವರು.
ಜನವರಿ 3 ರಂದು 2021 ರ ಫಲಿತಾಂಶ ಪ್ರಕಟವಾಗಿದ್ದು ಮಾರುತಿ ಹಾಗೂ ಸಯಾಲಿ ಕ್ರಮವಾಗಿ 100% ಹಾಗೂ 99.97% ಅಂಕದೊಂದಿಗೆ ಉತ್ತೀರ್ಣರಾಗಿದ್ದಾರೆ. ಇವರಿಬ್ಬರೂ ಐಐಎಮ್ ಅಹಮದಾಬಾದ್ (IIM-Ahmedabad) ಹಳೆ ವಿದ್ಯಾರ್ಥಿಗಳು ಎನ್ನುವುದು ವಿಶೇಷ.
ಪ್ರತಿ ಬಾರಿ ಗೆಲ್ಲುವಾಗಲೂ ಹೊಸತರಂತೆಯೇ ಚೈತನ್ಯವನ್ನು ನೀಡುತ್ತದೆ. ನೂತನ ಮಾದರಿಯ ಪರೀಕ್ಷಾ ವಿಧಾನವನ್ನು ಅರಿಯುವ ಸಲುವಾಗಿ ಪರೀಕ್ಷೆಗೆ ಹಾಜರಾಗಿದ್ದೆವು. ಇದರಿಂದ ವಿದ್ಯಾರ್ಥಿಗಳಿಗೆ ಇನ್ನಷ್ಟು ಪರಿಣಾಮಕಾರಿಯಾಗಿ ಹೇಳಿಕೊಡಲು ಸಾಧ್ಯವಾಗಬಹುದು ಎಂದು ಭಾವಿಸಿರುವುದಾಗಿ ಮಾರುತಿ ಹೇಳಿದ್ದಾರೆ.
ವೈಜಾಗ್ ಮೂಲದ ಮಾರುತಿ ವೈಜಾಗ್ನಿಂದ ಪ್ರಾಥಮಿಕ ಶಾಲಾ ಶಿಕ್ಷಣವನ್ನು ಪೂರ್ಣಗೊಳಿಸಿ ನಂತರ ಜೆಇಇಗೆ ಹಾಜರಾಗಿದ್ದರು. ಅವರು ಐಐಟಿ-ಬಾಂಬೆಯಿಂದ ಕಂಪ್ಯೂಟರ್ ಸೈನ್ಸ್ನಲ್ಲಿ ಬಿಟೆಕ್ ಪೂರ್ಣಗೊಳಿಸಿದರು. ಮಾರುತಿ ಮೊದಲ ಬಾರಿಗೆ 2008 ರಲ್ಲಿ CAT ಪರೀಕ್ಷೆಗೆ ಹಾಜರಾಗಿದ್ದರು. ಅದರಲ್ಲಿ 99.97 ಶೇಕಡಾ ಅಂಕವನ್ನು ಪಡೆದಿದ್ದರು. 2009 ರಲ್ಲಿ ಐಐಎಂ ಅಹಮದಾಬಾದ್ಗೆ ಸೇರಿಕೊಂಡ ಅವರು ಅಲ್ಲಿ ತಮ್ಮ ಪತ್ನಿ ಸಯಾಲಿ ಕಾಳೆ ಅವರನ್ನು ಭೇಟಿಯಾಗಿದ್ದರು.
ಮಹಾರಾಷ್ಟ್ರದ ಥಾಣೆ ಮೂಲದ ಸಯಾಲಿ ಮುಂಬೈಯಲ್ಲಿ ಬಿಟೆಕ್ ಪೂರ್ಣಗೊಳಿಸಿದ್ದು, 2008ರ CAT ಪರೀಕ್ಷೆಯಲ್ಲಿ 99.91% ಪಡೆದಿದ್ದರು. ಬಳಿಕ ಐಐಎಮ್ ಗೆ ಸೇರಿಕೊಂಡಿದ್ದರು.
ಐಐಎಮ್ ವ್ಯಾಸಂಗದ ಬಳಿಕ ಸಿಂಗಾಪುರ ಹಾಗೂ ಹಾಂಕಾಂಗ್ನಲ್ಲಿ ಕೆಲಸ ಮಾಡಿದ್ದ ದಂಪತಿ ಕೆಲಸದಲ್ಲಿ ಅತೃಪ್ತರಾಗಿ ಮರಳಿ ಭಾರತಕ್ಕೆ ಬಂದು ತಮ್ಮದೇ ಸ್ವಉದ್ದಿಮೆ ಪ್ರಾರಂಭಿಸಿದ್ದಾರೆ. CAT ಅಭ್ಯರ್ಥಿಗಳಿಗೆ ಕೋಚಿಂಗ್ ನೀಡುವ ಕ್ರಾಕು (Cracku) ಎಂಬ ಸಂಸ್ಥೆಯನ್ನು ಪ್ರಾರಂಭಿಸಿದ್ದರು.
2008 ರ ಬಳಿಕ 2019 ರಲ್ಲೂ ಒಮ್ಮೆ ಸಿಎಟಿ ಪರೀಕ್ಷೆಗೆ ಹಾಜರಾಗಿದ್ದ ಮಾರುತಿ 100% ಗಳೊಂದಿಗೆ ಉತ್ತೀರ್ಣರಾಗಿದ್ದರು. 2020 ರಲ್ಲೂ ಹಾಜರಾಗಿದ್ದು 99.99% ಪಡೆದಿದ್ದಾರೆ. 2008 ರಲ್ಲಿ ಪೆನ್ ಹಾಗೂ ಪೇಪರ್ಗಳ ಮುಖಾಂತರ ಪರೀಕ್ಷೆ ನಡೆಸಲಾಗುತ್ತಿದ್ದರೆ, ಇತ್ತೀಚೆಗೆ ಅದು ಸಿಬಿಟಿ ಮೋಡ್ಗೆ ಬದಲಾಗಿದೆ. ಆದರೆ, ಒಂದು ದಶಕದಲ್ಲಿ ಪರೀಕ್ಷೆಯ ಕಷ್ಟದ ಮಟ್ಟ ಮತ್ತು ಕೇಳಿದ ಪ್ರಶ್ನೆಗಳ ಗುಣಮಟ್ಟವು ಹಾಗೇ ಇದೆ. ಕಠಿಣ ಪರಿಶ್ರಮ ಒಂದೇ ಈ ಪರೀಕ್ಷೆ ಬೇಧಿಸಲು ಇರುವ ಕ್ರಮ ಎಂದು ಮಾರುತಿ ಹೇಳಿದ್ದಾರೆ.







