ಲಾಕ್ಡೌನ್ ಜಾರಿಯಿಂದ ಆರ್ಥಿಕತೆ ಕುಂಠಿತ: ಕಾಸಿಯಾ ಆತಂಕ

ಫೈಲ್ ಚಿತ್ರ
ಬೆಂಗಳೂರು, ಜ.4: ಕಾಸಿಯಾ ವಿಶೇಷವಾಗಿ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ(ಎಂಎಸ್ಎಂಇ) ಸ್ಥಿತಿ ಬಗ್ಗೆ ಚಿಂತಿಸುತ್ತಿದೆ. ದಿನಂಪ್ರತಿ ಹೆಚ್ಚಳ ಆಗುತ್ತಿರುವ ಕೊರೋನ ಸೋಂಕು ಪ್ರಕರಣಗಳಿಂದಾಗಿ ರಾಜ್ಯ ಸರಕಾರ ಲಾಕ್ಡೌನ್ ಅಥವಾ ಇತರ ಕಠಿಣ ಕ್ರಮಗಳ ರೂಪದಲ್ಲಿ ಯಾವುದೇ ರೀತಿಯ ಪ್ರಕ್ರಿಯೆ ಕೈಗೊಳ್ಳಬಾರದು ಎಂದು ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘ(ಕಾಸಿಯಾ) ಕೋರಿದೆ.
ಕೊರೋನ 1ನೆ ಅಲೆ ಹಾಗೂ 2ನೆ ಅಲೆ ಸಂದರ್ಭದಲ್ಲಿ ಲಾಕ್ಡೌನ್ ಮಾಡಲಾಗಿತ್ತು. ಇದರಿಂದ, ಕೈಗಾರಿಕೆಗಳು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದವು. ಇಂತಹ ಸಮಸ್ಯೆಯಿಂದ ಪಾರಾಗಬೇಕಾದರೆ ಲಾಕ್ಡೌನ್ ಜಾರಿಗೊಳಿಸಬಾರದು ಎಂದು ಕಾಸಿಯಾ ಮನವಿ ಮಾಡಿದೆ.
ಕೈಗಾರಿಕೆಗಳನ್ನು ಮತ್ತು ಕಚ್ಚಾ ಸಾಮಗ್ರಿಗಳ ಮಳಿಗೆಗಳನ್ನು ಭಾಗಶಃ ಅಥವಾ ಸಂಪೂರ್ಣವಾಗಿ ಮುಚ್ಚುವ ಮತ್ತು ಕೈಗಾರಿಕೆಗಳಿಗೆ ಕೈಗಾರಿಕಾ ಆಮ್ಲಜನಕದ ಪೂರೈಕೆಯನ್ನು ಕಡಿಮೆ ಮಾಡುವ ಬದಲು, ಅಗತ್ಯ ಶಿಷ್ಟಾಚಾರಗಳನ್ನು ಅನುಸರಿಸಿ ಸಾರ್ವಜನಿಕ ಕಾರ್ಯಕ್ರಮಗಳು ಮತ್ತು ಸಾಮೂಹಿಕ ಸಭೆಗಳನ್ನು ನಡೆಸುವ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ನಾಗರಿಕರು ಮಾಸ್ಕ್ಗಳನ್ನು ಧರಿಸುವುದು ಮತ್ತು ಸುರಕ್ಷಿತ ಅಂತರವನ್ನು ಕಾಪಾಡಿಕೊಳ್ಳುವುದನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವತ್ತ ಸರಕಾರ ಗಮನಹರಿಸಬೇಕು ಎಂದು ಕಾಸಿಯಾ ಸೂಚಿಸಿದೆ.
ಹಿಂದಿನ ಲಾಕ್ ಡೌನ್ ಪರಿಣಾಮದಿಂದ ಈಗಾಗಲೇ ಸಾಕಷ್ಟು ಉದ್ಯಮಗಳು ಶಾಶ್ವತವಾಗಿ ಮುಚ್ಚಿವೆ. ಅಲ್ಲದೆ, ಪೂರೈಕೆ ಸರಪಳಿಗಳ ಕೊಂಡಿಗಳು ಕಳಚಿಕೊಳ್ಳಲಿರುವುದರಿಂದ ಉದ್ಯಮಗಳು ಸಂಪೂರ್ಣವಾಗಿ ನಾಶವಾಗುವುದಲ್ಲದೆ ಕಾರ್ಮಿಕರು ಶಾಶ್ವತವಾಗಿ ಉದ್ಯೋಗ ಕಳೆದುಕೊಂಡು ನಿರುದ್ಯೋಗಿಗಳಾಗಲಿದ್ದಾರೆ. ಹಾಗಾಗಿ ಯಾವುದೇ ಸಮಯದಲ್ಲಿ ಆರ್ಥಿಕತೆಯ ಕುಸಿತ ಮರುಕಳಿಸಲಿದೆ ಎಂದು ಕಾಸಿಯಾ ತಿಳಿಸಿದೆ.







